ನವದೆಹಲಿ: ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ, ವಿವಾದಾತ್ಮಕ ಪೋಸ್ಟ್‌ಗಳನ್ನು ಮಾಡುತ್ತಾ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಈಗಾಗಲೇ ಅನೇಕ ಪ್ರಕರಣಗಳು ದಾಖಲಾಗಿವೆ. ಇದೀಗ ನಟಿ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಕಂಗನಾಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಂಗನಾ ರಣಾವತ್ ಅವರು ಭವಿಷ್ಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಎಲ್ಲ ಪೋಸ್ಟ್ಗಳಿಗೆ ಸೆನ್ಸಾರ್ ಕೋರಿ ಸುಪ್ರೀಂಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿತ್ತು. ಆದರೆ, ಈ ಮನವಿಯನ್ನು ಪರಿಗಣಿಸಲು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ನಿರಾಕರಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಕೀಲ ಚರಣ್‌ಜೀತ್ ಸಿಂಗ್ ಚಂದ್ರಪಾಲ್ ಅವರು ಸಲ್ಲಿಸಿದ್ದರು. ಕಂಗಾನಾರ ಪೋಸ್ಟ್‌ಗಳನ್ನು ಸೆನ್ಸಾರ್ ಮಾಡಲು ಹಾಗೂ ನಟಿ ವಿರುದ್ಧ ಭಾರತದಾದ್ಯಂತ ದಾಖಲಾಗಿರುವ ಎಫ್‌ಐಆರ್‌ಗಳನ್ನು ಮುಂಬೈನ ಖಾರ್ ಪೊಲೀಸ್ ಠಾಣೆಗೆ ವರ್ಗಾಯಿಸಲು ನಿರ್ದೇಶನ ನೀಡಿವಂತೆ ಅರ್ಜಿಯಲ್ಲಿ ಚಂದ್ರಪಾಲ್ ಮನವಿ ಮಾಡಿದ್ದರು.
ಅಲ್ಲದೇ, ಆರು ತಿಂಗಳೊಳಗಾಗಿ ಚಾರ್ಜ್ ಶೀಟ್ ಸಲ್ಲಿಸಲು ಹಾಗೂ ಕಂಗನಾ ವಿರುದ್ಧ ಇರುವ ಎಲ್ಲ ಕೇಸ್ಗಳನ್ನು ಎರಡು ವರ್ಷಗಳ ಒಳಗೆ ತ್ವರಿತ ವಿಚಾರಣೆ ನಡೆಸಬೇಕು ಎಂದು ಅವರು ಕೋರಿದ್ದರು.
ಇದನ್ನೂ ಓದಿ: ಮೊದಲ ಮಗು ಪಡೆದ ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೊನಾಸ್ ದಂಪತಿ!
ಸೋಷಿಯಲ್ ಮೀಡಿಯಾಗಳಲ್ಲಿ ನಟಿ ಮಾಡುವ ಟೀಕೆಗಳು ಮತ್ತು ಪೋಸ್ಟ್‌ಗಳು ಅತಿರೇಕದ ಮತ್ತು ದೂಷಣೆ ಮಾತ್ರವಲ್ಲದೇ ಗಲಭೆಗಳನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿವೆ. ಅವು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುತ್ತವೆ. ಸಿಖ್ಖರನ್ನು ಸಂಪೂರ್ಣವಾಗಿ ರಾಷ್ಟ್ರವಿರೋಧಿಯಾಗಿ ಚಿತ್ರಿಸುತ್ತವೆ.
ಇದು ಅಮಾಯಕ ಸಿಖ್ಖರ ಹತ್ಯೆಯನ್ನು ಸಮರ್ಥಿಸುತ್ತದೆ. ಈ ಪೋಸ್ಟ್‌ಗಳು ನಮ್ಮ ದೇಶದ ಏಕತೆಗೆ ತದ್ವಿರುದ್ಧವಾಗಿದ್ದು, ಕಾನೂನಿನ ಅಡಿಯಲ್ಲಿ ನಟಿ ಕಂಗನಾ ಶಿಕ್ಷಗೆ ಅರ್ಹರು, ಅವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ವಕೀಲರು ತಿಳಿಸಿದ್ದರು.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ