ಪೂರ್ನಿಯಾ (ಬಿಹಾರ್): ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಚರ್ಚೆಗಳು, ವಾದ ವಿವಾದಗಳು ನಡೆಯುತ್ತಿದೆ. ಈ ನಡುವೆ ಸುಶಾಂತ್ ಹುಟ್ಟೂರು ಬಿಹಾರದ ಪೂರ್ನಿಯಾ ನಿವಾಸಿಗಳು ಅಲ್ಲಿನ ರಸ್ತೆಗಳಿಗೆ ಸುಶಾಂತ್ ಹೆಸರಿಡುವ ಮೂಲಕ ಗೌರವ ಸಲ್ಲಿಸಿದ್ದಾರೆ.
ಸುಶಾಂತ್ ನಿಧನದ ಬಳಿಕ ಪ್ರಮುಖ ರಸ್ತೆಗಳಿಗೆ ಸುಶಾಂತ್ ಹೆಸರಿಡಲು ಪೂರ್ನಿಯಾ ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದ್ದರು. ಅದರಂತೆ ಪೂರ್ನಿಯಾ ಮುನ್ಸಿಪಲ್ ಕಾರ್ಪೋರೇಷನ್ ಮೇಯರ್ ಸವಿತಾ ದೇವಿ, ಸುಶಾಂತ್ ಹೆಸರಿನಲ್ಲಿ ಮರುನಾಮಕರಣಗೊಂಡ ರಸ್ತೆಗಳನ್ನುಇಂದು ಉದ್ಘಾಟಿಸಿದ್ದಾರೆ. ಮೇಯರ್ ಸವಿತಾ ದೇವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಪೊರೇಷನ್ ಸ್ಥಾಯಿ ಸಮಿತಿ ಸದಸ್ಯರು ರಸ್ತೆಗಳಿಗೆ ಸುಶಾಂತ್ ಹೆಸರನ್ನು ಮರುನಾಮಕರಣ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿದ್ದರು.
ಮೇಯರ್ ಸವಿತಾ ದೇವಿ ಅವರ ಅಧ್ಯಕ್ಷತೆಯಲ್ಲಿ ನಿಗಮದ ಸ್ಥಾಯಿ ಸಮಿತಿಯ ಸದಸ್ಯರು ಶುಕ್ರವಾರ ಈ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿದರು. ಎಲ್ಲರ ಒಪ್ಪಿಗೆ ಪಡೆದು ನಿರ್ಣಯ ಕೈಗೊಳ್ಳುವಲ್ಲಿ ಸ್ವಲ್ಪ ತಡವಾಯಿತು. ರಸ್ತೆ ಮರುನಾಮಕರಣಕ್ಕೆ ಎಲ್ಲರೂ ಸರ್ವಾನುಮತದಿಂದ ಒಪ್ಪಿದ್ದಾರೆ. ಅದರಂತೆ ಡಾಲರ್ ಹೌಸ್ ಚೌಕದಿಂದ ಮಾತಾ ಚೌಕ್ ಹಾಗೂ ಪೋರ್ಡ್ ಕಂಪನಿ ವೃತ್ತದವರೆಗಿನ ರಸ್ತೆಗೆ ಸುಶಾಂತ್ ಹೆಸರಿಟ್ಟು ಈಗಾಗಲೇ ಫಲಕ ಸ್ಥಾಪಿಸಿದ್ದೇವೆ ಎಂದು ಮೇಯರ್ ಸವಿತಾ ದೇವಿ ಹೇಳಿದ್ದಾರೆ.
ಸ್ಥಳೀಯ ನಿವಾಸಿ ಸಂತೋಷ್ ಮಾತನಾಡಿ, ಸುಶಾಂತ್ ಸಿಂಗ್ ರಜಪೂತ್ ಈ ಮಣ್ಣಿನ ಮಗ. ಸುಶಾಂತ್ ಈಗ ನಮ್ಮೊಂದಿಗೆ ಇಲ್ಲವಾದರೂ ಅವರ ಹೆಸರು ಶಾಶ್ವತವಾಗಿ ಉಳಿಯಬೇಕು. ಈ ಮೂಲಕ ನಾವು ಈ ಊರಿನ ಮಗನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದೇವೆ ಎಂದು ಹೇಳಿದರು.
ಮುಂಬೈನ ಬಾಂದ್ರಾದ ತಮ್ಮ ಅಪಾರ್ಟ್ಮೆಂಟ್ನಲ್ಲಿ ಸುಶಾಂತ್ ಸಿಂಗ್ ರಜಪೂತ್ ದೇಹ ಜೂನ್ 14 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಕಳೆದ ಕೆಲವು ದಿನಗಳಿಂದ ಡಿಪ್ರೆಷನ್ನಲ್ಲಿದ್ದು ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬ ವಿಚಾರ ತನಿಖೆ ವೇಳೆ ತಿಳಿದುಬಂದಿತ್ತು.