ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಶೋಯಿಕ್ ಚಕ್ರವರ್ತಿ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಿರೋಧಿಸಿದೆ.
ಅವರಿಬ್ಬರು "ಉನ್ನತ ಸಮಾಜದ ವ್ಯಕ್ತಿಗಳು ಮತ್ತು ಡ್ರಗ್ಸ್ ಪೂರೈಕೆದಾರರೊಂದಿಗೆ ಸಂಪರ್ಕ ಹೊಂದಿದ್ದ ಡ್ರಗ್ಸ್ ಸಿಂಡಿಕೇಟ್‌ನ ಸಕ್ರಿಯ ಸದಸ್ಯರು" ಎಂದು ಎನ್‌ಸಿಬಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಆರೋಪಿಸಿದೆ.
ರಿಯಾ ಚಕ್ರವರ್ತಿ ಮತ್ತು ಅವರ ಸಹೋದರ ಇಬ್ಬರೂ ಮಾದಕ ವಸ್ತು ವಹಿವಾಟಿಗೆ ಸಹಾಯ ಮತ್ತು ಹಣಕಾಸು ನೀಡಿದ್ದಾರೆ ಎಂದು ಎನ್‌ಸಿಬಿ ಹೇಳಿದೆ.
ಆದ್ದರಿಂದ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯ ಸೆಕ್ಷನ್ 27 ಎ ಅಡಿಯಲ್ಲಿ ಕಟ್ಟುನಿಟ್ಟಾದ ಕ್ರಮ ಕಯಗೊಳ್ಳಬೇಕೆಂದು ಅಫಿಡವಿಟ್‌ನಲ್ಲಿ ಮನವಿ ಮಾಡಿದೆ.
ಸೆಕ್ಷನ್ 27 ಎ ಮಾದಕ ವಸ್ತು ಕಳ್ಳಸಾಗಣೆ ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿದ್ದಕ್ಕಾಗಿ 10 ವರ್ಷಗಳವರೆಗೆ ಜಾಮೀನು ರಹಿತ ಜೈಲು ಶಿಕ್ಷೆ ನೀಡುತ್ತದೆ.
ರಿಯಾ ಚಕ್ರವರ್ತಿ ತನ್ನ ಗೆಳೆಯ, ನಟ ಸುಶಾಂತ್ ಸಿಂಗ್ ರಜಪೂತ್ ಸೇವಿಸುತ್ತಿದ್ದ ಡ್ರಗ್ಸ್ಗೆ ಸಾಂದರ್ಭಿಕವಾಗಿ ಹಣ ಪಾವತಿಸುತ್ತಿದ್ದುದರಿಂದ ಪ್ರಸ್ತುತ ಪ್ರಕರಣದಲ್ಲಿ ಈ ವಿಭಾಗವು ಅನ್ವಯಿಸುವುದಿಲ್ಲ ಎಂದು ಅವರ ವಕೀಲ ಸತೀಶ್ ಮನೇಶಿಂದೆ ಕಳೆದ ವಾರ ವಾದಿಸಿದ್ದರು.
ಈ ಪ್ರಕರಣದಲ್ಲಿ ಎನ್‌ಸಿಬಿ ವಶಪಡಿಸಿಕೊಂಡ ಡ್ರಗ್ಸ್ ಕೇವಲ 59 ಗ್ರಾಂಗಳಷ್ಟಿದ್ದು, ಅದು ವಾಣಿಜ್ಯ ಪ್ರಮಾಣವಲ್ಲ. ಆದ್ದರಿಂದ ಸೆಕ್ಷನ್ 27 ಎ ಅನ್ವಯಿಸಬಾರದು ಎಂದು ವಾದಿಸಿದ್ದರು.
ಈ ತಿಂಗಳ ಆರಂಭದಲ್ಲಿ ಬಂಧನಕ್ಕೊಳಗಾದ ಮತ್ತು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದ ರಿಯಾ ಚಕ್ರವರ್ತಿ ಮತ್ತು ಅವರ ಸಹೋದರನ ಜಾಮೀನು ಅರ್ಜಿಗೆ ಎನ್‌ಸಿಬಿ ತನ್ನ ಆಕ್ಷೇಪಣೆ ಸಲ್ಲಿಸುವಂತೆ ಸಾರಂಗ್ ಕೊಟ್ವಾಲ್ ನ್ಯಾಯಪೀಠವು ಈ ಹಿಂದೆ ಸೂಚಿಸಿತ್ತು.
ಎನ್‌ಸಿಬಿ ಸೆಕ್ಷನ್ 27 ಎ ನಿಬಂಧನೆಗಳು ಮತ್ತು ಪ್ರಸ್ತುತ ಪ್ರಕರಣದಲ್ಲಿ ಅದರ ಅನ್ವಯಿಸುವಿಕೆ ಬಗ್ಗೆ ವಿಸ್ತಾರವಾಗಿ ಹೇಳಬೇಕು ಎಂದು ನ್ಯಾಯಾಲಯ ಹೇಳಿತ್ತು.
ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹೈಕೋರ್ಟ್‌ನಲ್ಲಿ ಎರಡು ಪ್ರತ್ಯೇಕ ಅಫಿಡವಿಟ್‌ಗಳನ್ನು ಸಲ್ಲಿಸಿದ್ದಾರೆ. ಅದರಲ್ಲಿ "ವಾಟ್ಸಪ್ ಚಾಟ್‌ಗಳಂತಹ ಎಲೆಕ್ಟ್ರಾನಿಕ್ ಪುರಾವೆಗಳು, ಮೊಬೈಲ್, ಲ್ಯಾಪ್‌ಟಾಪ್ ಮತ್ತು ಹಾರ್ಡ್ ಡಿಸ್ಕ್ನಿಂದ ದಾಖಲೆಗಳನ್ನು ಪಡೆಯಲಾಗಿದೆ. ಇದು ಪಾವತಿಯನ್ನು ಸೂಚಿಸುತ್ತದೆ" ಎಂದು ಹೇಳಿದ್ದಾರೆ.
"ಹೀಗಾಗಿ ರಿಯಾ ನಿಯಮಿತವಾಗಿ ವ್ಯವಹರಿಸಿದ್ದಲ್ಲದೆ, ಮಾದಕ ವಸ್ತುಗಳ ಅಕ್ರಮ ಕಳ್ಳಸಾಗಣೆಗೆ ಹಣಕಾಸು ಒದಗಿಸಿದ್ದಾನೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ" ಎಂದು ಎನ್‌ಸಿಬಿ ಹೇಳಿದೆ.
"ಸುಶಾಂತ್ ಮಾದಕ ವಸ್ತುಗಳ ಸೇವನೆಯಲ್ಲಿದ್ದಾನೆ ಎಂಬ ಅಂಶವನ್ನು ರಿಯಾ ಚಕ್ರವರ್ತಿ ತಿಳಿದಿದ್ದು ಕೂಡ ಸತ್ಯ ಮರೆಮಾಚಿದ್ದಳು. ಇದಲ್ಲದೆ ಆಕೆ ಮಾದಕ ವಸ್ತು ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾಳೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ" ಎಂದು ಎನ್‌ಸಿಬಿ ಅಫಿಡವಿಟ್‌ನಲ್ಲಿ ತಿಳಿಸಿದೆ.
ಸಹ ಆರೋಪಿ ಸ್ಯಾಮ್ಯುಯೆಲ್ ಮಿರಾಂಡಾ, ಅಬ್ದುಲ್ ಪರಿಹಾರ್ ಮತ್ತು ದೀಪೇಶ್ ಸಾವಂತ್ ಅವರ ಜಾಮೀನು ಅರ್ಜಿಯೊಂದಿಗೆ ನಟಿ ಮತ್ತು ಆಕೆಯ ಸಹೋದರರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಿಚಾರಣೆ ನಡೆಸಲಿದೆ.