ಮುಂಬೈ: ಬಾಲಿವುಡ್ ನಟಿ ರಾಧಿಕಾ ಮದನ್ ಪ್ರತಿ ಸಿನಿಮಾದಲ್ಲಿ ತಾವು ಉತ್ತಮ ನಟಿ ಎಂಬುದನ್ನು ಸಾಬೀತು ಮಾಡುತ್ತಲೇ ಬಂದಿದ್ದಾರೆ. ನನಗೆ ಒಳ್ಳೆ ಹೆಸರು ನೀಡುವಂತ ಯಾವುದೇ ಪಾತ್ರವನ್ನು ನಾನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಈ ನಟಿ ಅನೇಕ ಸಂದರ್ಶನದಲ್ಲೂ ಹೇಳಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ಅಂಗ್ರೇಜಿ ಮೀಡಿಯಂ' ಚಿತ್ರದಲ್ಲಿರಾಧಿಕಾ ಮದನ್ ಇರ್ಫಾನ್ ಖಾನ್ ಪುತ್ರಿಯಾಗಿ ನಟಿಸಿ ಸಿನಿಪ್ರಿಯರ ಗಮನ ಸೆಳೆದಿದ್ದರು. 2018 ರಲ್ಲಿ ರಾಧಿಕಾ ನಟಿಸಿದ ಮೊದಲ ಸಿನಿಮಾ 'ಪಠಾಖ' ಸಿನಿಮಾ ನಂತರವೇ ಆಕೆ ಅನೇಕ ಅಭಿಮಾನಿಗಳನ್ನು ಗಳಿಸಿದ್ದರು. ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಮಾತನಾಡಿರುವ ರಾಧಿಕಾ, ನಾನು ಇದುವರೆಗೂ ಮಾಡಿರದಂತ ಪಾತ್ರಗಳನ್ನು ಮಾಡುವ ಆಸೆ. ಮತ್ತೆ ಮತ್ತೆ ಅದೇ ಪಾತ್ರಗಳನ್ನು ಮಾಡಲು ನನಗೆ ಇಷ್ಟ ಇಲ್ಲ ಎನ್ನುತ್ತಾರೆ. ಪ್ರತಿ ಕಲಾವಿದರೂ, ಪ್ರತಿ ಸಿನಿಮಾಗಳಲ್ಲೂ ವಿಭಿನ್ನ ಪಾತ್ರಗಳು ಹಾಗೂ ವಿಭಿನ್ನ ಚಾಲೆಂಜ್ಗಳನ್ನು ಸ್ವೀಕರಿಸುವುದು ಬಹಳ ಮುಖ್ಯ ಎನ್ನುವ ರಾಧಿಕಾ, ತಮ್ಮ ಮುಂಬರುವ ಸಿನಿಮಾ 'ಶಿದ್ದತ್' ಬಿಡುಗಡೆಗೆ ಕಾಯುತ್ತಿದ್ದಾರೆ.
'ಶಿದ್ದತ್' ಚಿತ್ರದಲ್ಲಿ ರಾಧಿಕಾ ಮದನ್ ಈಜುಗಾರ್ತಿಯಾಗಿ ನಟಿಸಿದ್ದಾರೆ. ''ನಿಜ ಹೇಳಬೇಕೆಂದರೆ ಈ ಪ್ರಾಜೆಕ್ಟ್ಗೆ ಸಹಿ ಮಾಡುವಾಗ ನನಗೆ ಈಜು ಬರುತ್ತಿರಲಿಲ್ಲ. ನಂತರವಷ್ಟೇ ಈಜು ಕಲಿತದ್ದು. ಅದಕ್ಕಾಗಿ 4 ತಿಂಗಳ ತರಬೇತಿ ಪಡೆದಿದ್ದೇನೆ ಎಂದಿದ್ದಾರೆ. 'ಜನ್ನತ್' ಖ್ಯಾತಿಯ ಕುನಾಲ್ ದೇಶ್ಮುಖ್ ಶಿದ್ದತ್ ಚಿತ್ರವನ್ನು ನಿರ್ದೇಶಿಸಿದ್ದು ಮೊಹಿತ್ ರೈನಾ, ಡಯಾನಾ ಪೆಂಟಿ ಹಾಗೂ ಸನ್ನಿ ಕೌಶಲ್ ಈ ಚಿತ್ರದಲ್ಲಿ ನಟಿಸಿದ್ದಾರೆ.