ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಬಾಲಿವುಡ್ನಲ್ಲಿ ಸ್ವಜನಪಕ್ಷಪಾತ ವಿಚಾರವಾಗಿ ಪ್ರತಿದಿನ ಚರ್ಚೆ ನಡೆಯುತ್ತಿದೆ. ಅನೇಕ ನಟ-ನಟಿಯರು ನೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ. ಇದೀಗ ರಾಧಿಕಾ ಆಪ್ಟೆ ಕೂಡಾ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸ್ವಜನಪಕ್ಷಪಾತದ ಸಂಭಾಷಣೆಯೇ ಬಹಳ ಜಟಿಲವಾದದ್ದು, ಅಲ್ಲದೆ ಇದು ಕೇವಲ ಚಿತ್ರರಂಗಕ್ಕೆ ಮಾತ್ರ ಸಂಬಂಧಿಸಿದ ವಿಚಾರವಲ್ಲ. ನಾನು ಈ ಚರ್ಚೆಯಲ್ಲಿ ಭಾಗಿಯಾಗಲು ಇಷ್ಟಪಡುವುದಿಲ್ಲ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ. ಇದು ಚಿತ್ರರಂಗಕ್ಕೆ ಹೊರಗಿನಿಂದ ಬಂದವರು ಅಥವಾ ನೆಪೋಕಿಡ್ಸ್ ವಿಚಾರಕ್ಕೆ ಮಾತ್ರ ಸಂಬಂಧಿಸಿದ ವಿಚಾರವಲ್ಲ, ಇದೊಂದು ಆಳವಾದ ವಿಚಾರ. ಇದಕ್ಕೆ ಉತ್ತರ ಕೂಡಾ ಇಲ್ಲ. ಈ ಸಮಾಜದಲ್ಲಿ ನಾವೆಲ್ಲರೂ ಸ್ವಜನಪಕ್ಷಪಾತವನ್ನು ಬಹಳವಾಗಿ ಪ್ರೋತ್ಸಾಹಿಸಿದ್ದೇವೆ. ಅದನ್ನು ಬದಲಿಸಬೇಕೆಂದರೆ ನಾವು ಅದನ್ನು ನೋಡುವ ನೋಟವನ್ನು ಬದಲಿಸಿಕೊಳ್ಳಬೇಕು.
ಯಶಸ್ಸನ್ನು ಪಡೆಯುವುದು ಹೊರಗಿನಿಂದ ಬಂದವರಿಗೂ ಕಷ್ಟ, ಸ್ಟಾರ್ ಮಕ್ಕಳಿಗೂ ಕಷ್ಟ. ಸೆಲಬ್ರಿಟಿ ಮಕ್ಕಳಾಗಿ ಹುಟ್ಟಿದ ಮಾತ್ರಕ್ಕೆ ಸಕ್ಸಸ್ ದೊರೆಯುವುದಿಲ್ಲ. ಇದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವೇ ಇಲ್ಲ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ರಾಧಿಕಾ ಆಪ್ಟೆ, ನಾನು ಎಂದಿಗೂ ಗೆಲುವಿನ ಬೆನ್ನು ಹತ್ತಿದವಳಲ್ಲ, ಸೋಲು ಗೆಲುಗು ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ. ಸಿನಿಮಾಗಳು ಸೋತಾಗ ಬೇಸರ ಮಾಡಿಕೊಂಡು ಕೂರುವುದಾಗಲಿ, ಗೆದ್ದಾಗ ಅದನ್ನು ಸೆಲಬ್ರೇಟ್ ಮಾಡುವುದಾಗಲೀ ನನಗೆ ಅಭ್ಯಾಸವಿಲ್ಲ ಎಂದು ಹೇಳಿಕೊಂಡಿದ್ದರು.
2005 ರಲ್ಲಿ 'ಲೈಫ್ ಹೊ ತೊ ಏಸಿ' ಚಿತ್ರದಲ್ಲಿ ಪುಟ್ಟ ಪಾತ್ರವೊಂದನ್ನು ಮಾಡುವ ಮೂಲಕ ರಾಧಿಕಾ ಆಪ್ಟೆ ಬಾಲಿವುಡ್ಗೆ ಕಾಲಿಟ್ಟರು. ನಂತರ ಶೋರ್ ಇನ್ ದಿ ಸಿಟಿ, ಕಬಾಲಿ, ಫೋಬಿಯಾ, ಬದ್ಲಾಪುರ್, ಅಹಲ್ಯ. ಪ್ಯಾಡ್ಮ್ಯಾನ್ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.