ಮುಂಬೈ : ಬಾಲಿವುಡ್ ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿರುವ ನಟಿ ಪಾಯಲ್ ಘೋಷ್, ಈ ಕುರಿತು ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಹೇಳಿದ್ದಾರೆ.
ನನಗೆ ಭದ್ರತೆ ಒದಗಿಸುವಂತೆ ನನ್ನ ವಕೀಲ ನಿತಿನ್ ಸತ್ಪೂಟ್ ಅವರು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಪತ್ರ ಬರೆಯಲಿದ್ದಾರೆ ಎಂದು ಪಾಯಲ್ ತಿಳಿಸಿದ್ದಾರೆ.
![Payal Ghosh](https://etvbharatimages.akamaized.net/etvbharat/prod-images/96866954_265055961307812_5626500403900648596_n_2109newsroom_1600675340_998.jpg)
'ಅನುರಾಗ್ ಕಶ್ಯಪ್ ಡ್ರಗ್ಸ್ ಸೇವಿಸುತ್ತಾರೋ ಇಲ್ಲವೋ ಎಂದು ನನಗೆ ಗೊತ್ತಿಲ್ಲ. ಆದರೆ, ನಾನು ಅವರನ್ನು ಭೇಟಿಯಾಗಿದ್ದಾಗ, ಅವರು ಧೂಮಪಾನ ಮಾಡುತ್ತಿದ್ದರು. ಆದರೆ, ಅದು ಖಂಡಿತವಾಗಿಯೂ ಸಿಗರೇಟ್ ಆಗಿರಲಿಲ್ಲ' ಎಂದು ಹೇಳಿದರು.
ಈ ಆರೋಪಗಳನ್ನ ತಳ್ಳಿ ಹಾಕಿರುವ ಅನುರಾಗ್ ಕಶ್ಯಪ್ ಪರ ವಕೀಲರು, ಇದು ಸಂಪೂರ್ಣ ಸುಳ್ಳು ಆರೋಪ ಎಂದು ಹೇಳಿದ್ದಾರೆ.
![Anurag Kashyap](https://etvbharatimages.akamaized.net/etvbharat/prod-images/d11081d35b59243452e39b3e2254e2da_2109newsroom_1600670023_839.jpg)
'ಐದು ವರ್ಷಗಳ ಹಿಂದೆ ನಾನು ಕೆಲಸಕ್ಕೆ ಸಂಬಂಧಿಸಿದಂತೆ ಅನುರಾಗ್ ಕಶ್ಯಪ್ ಅವರನ್ನು ಭೇಟಿಯಾಗಿದ್ದೆ. ಅವರು ನನ್ನನ್ನು ಮನೆಗೆ ಕರೆದರು. ನಾನು ಅಲ್ಲಿಗೆ ಹೋದಾಗ ಪ್ರತ್ಯೇಕ ಕೋಣೆಗೆ ಕರೆದೊಯ್ದು, ನನ್ನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದರು' ಎಂದು ಪಾಯಲ್ ಘೋಷ್ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅನುರಾಗ್ ಕಶ್ಯಪ್, ಟ್ವಿಟರ್ ಮೂಲಕ ಆರೋಪಗಳನ್ನು ನಿರಾಕರಿಸಿದ್ದಾರೆ. 'ನಾನು ಈ ರೀತಿ ವರ್ತಿಸುವುದಿಲ್ಲ ಮತ್ತು ಈ ಆರೋಪ ಸಹಿಸುವುದಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.