ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ನಟಿ ಪರಿಣಿತಿ ಚೋಪ್ರಾ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ಕೊರೊನಾ ಬಿಕ್ಕಟ್ಟಿಗೆ ನಿಧಿ ಸಂಗ್ರಹಕ್ಕಾಗಿ 'ವರ್ಚ್ಯುವಲ್ ಕಾಫಿ ವಿತ್ ಪರಿಣಿತಿ' ಎಂಬ ಕಾರ್ಯಕ್ರಮದೊಂದಿಗೆ ದೇಶದಲ್ಲಿ 1000 ರೂ. ದೈನಂದಿನ ವೇತನ ಪಡೆಯುವ 4,000 ಕುಟುಂಬಗಳಿಗೆ ಆಹಾರವನ್ನು ಒದಗಿಸಲು ಅವರು ನಿರ್ಧರಿಸಿದ್ದಾರೆ.
ಗಿವ್ ಇಂಡಿಯಾ ಮಿಷನ್ ಮಂಡಳಿ ಜೊತೆಗೂ ಕೈಗೂಡಿಸಿದ್ದಾರೆ ಪರಿಣಿತಿ. ಈ ಮಂಡಳಿಯು ಕೊರೊನಾ ಬಿಕ್ಕಟ್ಟಿನಲ್ಲಿ ಸಿಲುಕಿರುವವರಿಗೆ ರೇಷನ್ ಕಿಟ್‌ಗಳನ್ನು ನೀಡುವ ಗುರಿ ಹೊಂದಿದೆ. ಈ ಅಭಿಯಾನದಲ್ಲಿ ಬೇಳೆ, ಅಕ್ಕಿ, ಗೋಧಿ ಹಿಟ್ಟು, ಉಪ್ಪು, ಮಸಾಲೆ, ಚಹಾ, ಸಕ್ಕರೆ, ಎಣ್ಣೆ ಇತ್ಯಾದಿಗಳನ್ನು ಒಳಗೊಂಡಿರುವ ಪಡಿತರ ಕಿಟ್‌ಗಳನ್ನು 4 ಜನರಿರುವ ಕುಟುಂಬಗಳಿಗೆ ಮಹಾರಾಷ್ಟ್ರ, ರಾಜಸ್ಥಾನ, ಬಿಹಾರ ಮತ್ತು ತಮಿಳುನಾಡಿನ ಕುಟುಂಬಗಳಿಗೆ ವಿತರಿಸಲಾಗುವುದು.
ಗಿವ್ ಇಂಡಿಯಾ ಅಭಿಯಾನಕ್ಕೆ ಕೈ ಜೋಡಿಸಿರುವ ಇನ್ನೋರ್ವ ತಾರೆ ಅರ್ಜುನ್ ಕಪೂರ್ ಅವರ ಸಹೋದರಿ ಅನ್ಶುಲಾ, ದೇಶದಲ್ಲಿ ಕೊರೊನಾ ಬಿಕ್ಕಟ್ಟಿನಿಂದಾಗಿ ಎರಡು ತುತ್ತು ಅನ್ನಕ್ಕಾಗಿ ಹೆಣಗಾಡುತ್ತಿರುವವರು ಅನೇಕರಿದ್ದಾರೆ. ಲಕ್ಷಾಂತರ ಮಂದಿ ದೈನಂದಿನ ವೇತನ ಪಡೆಯುವವರೂ ಇದ್ದಾರೆ. ಈ ಕಷ್ಟದ ಸ್ಥಿತಿಯಲ್ಲಿ ಅವರು ಏನೂ ಗಳಿಸಲು ಸಾಧ್ಯವಾಗುವುದಿಲ್ಲ, ಹಾಗಾಗಿ ಗಿವ್ ಇಂಡಿಯಾ ಮತ್ತು ನಾನು ಒಟ್ಟಾಗಿ ಅಂಥ ಕುಟುಂಬಗಳಿಗೆ ಪಡಿತರ ಕಿಟ್‌ಗಳನ್ನು ಒದಗಿಸುವ ಮೂಲಕ ಸಹಾಯ ಮಾಡಲು ಪ್ರಯತ್ನಿಸಿದ್ದೇವೆ ಎಂದಿದ್ದಾರೆ.
ಇನ್ನು ವರ್ಚ್ಯುವಲ್ ಕಾಫಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸುವವರು fankind.org/Parineeti ಗೆ ಲಾಗಿನ್ ಆಗಬೇಕು. ಆದರೆ ವರ್ಚ್ಯುವಲ್ ಡೇಟ್ಗೆ ಅರ್ಹರಾಗಬೇಕಾದರೆ ದಾನ ಮಾಡಬೇಕಾಗುತ್ತದೆ. ತಕ್ಷಣ ಸಹಾಯ ಬೇಕಾದವರಿಗೆ ಈ ದಾನದಿಂದ ಸಹಾಯವಾಗುತ್ತದೆ. ಸ್ಪರ್ಧೆಯು ಮೇ 6 ರಿಂದ ಪ್ರಾರಂಭವಾಗಲಿದೆ ಎಂದಿದ್ದಾರೆ.
ಯಾರೂ ಹಸಿವಿನಿಂದ ಮಲಗಬಾರದು. ಭಾರತದ ನಮ್ಮ ಸಹೋದರ, ಸಹೋದರಿಯರ ಸಲುವಾಗಿ ನಮ್ಮ ಕೈಲಾದುದನ್ನು ಮಾಡೋಣ. ಈ ನಿಧಿ ಸಂಗ್ರಹ ಕಾರ್ಯಕ್ರಮವನ್ನು ನಿಮ್ಮನ್ನು ವರ್ಚ್ಯುವಲ್ ಮಾದರಿಯಲ್ಲಿ ಭೇಟಿಯಾಗಲು ರಚಿಸಲಾಗಿದೆ. ನಮ್ಮೊಂದಿಗೆ ಕೈಜೋಡಿಸಿ ಅಗತ್ಯವಿರುವವರಿಗೆ ಸಹಾಯ ನೀಡೋಣ ಎಂದಿದ್ದಾರೆ ಪರಿಣಿತಿ.