ಮುಝಪ್ಪರ್ನಗರ ( ಉತ್ತರ ಪ್ರದೇಶ) : ಪತಿ ಮತ್ತು ಅವರ ನಾಲ್ವರು ಕುಟುಂಬಸ್ಥರ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿರುವ ನಟ ನವಾಝುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ, ನಗರದ ಬುಧಾನಾ ಪೊಲೀಸ್ ಠಾಣೆಗೆ ಆಗಮಿಸಿ ತನ್ನ ಹೇಳಿಕೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನಿಂದ ಬುಧಾನ ಪೊಲೀಸ್ ಠಾಣೆಗೆ ಆಗಮಿಸಿದ ಆಲಿಯಾ, ತನ್ನ ದೂರಿನಲ್ಲಿ ಆರೋಪಿಸಿರುವ ಅಂಶಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಬುಧಾನ ಎಸ್‌ಹೆಚ್‌ಒ ಕುಶಾಲ್ಪಾಲ್ ಸಿಂಗ್ ತಿಳಿಸಿದ್ದಾರೆ. ಜುಲೈ 27 ರಂದು ಮುಂಬೈ ಪೊಲೀಸ್ ಠಾಣೆಯಲ್ಲಿ ಆಲಿಯಾ ದೂರು ನೀಡಿದ್ದರು. ದೂರಿನಲ್ಲಿ ಉಲ್ಲೇಖಿಸಿದ್ದ ಘಟನೆ ಬುಧಾನ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಪ್ರಕರಣ ಇಲ್ಲಿಗೆ ರವಾನೆಯಾಗಿತ್ತು ಎಂದು ಕುಶಾಲ್ಪಾಲ್ ಸಿಂಗ್ ತಿಳಿಸಿದ್ದಾರೆ.
2012 ರಲ್ಲಿ ನಟ ನವಾಝುದ್ದೀನ್ ಸಿದ್ದಿಕಿಯ ಸಹೋದರ ಮಿನ್ಹಾಜುದ್ದೀನ್ ಸಿದ್ದಿಕಿ ಮತ್ತು ಕುಟುಂಬಸ್ಥರು ತನಗೆ ಕಿರುಕುಳ ನೀಡಿರುವುದಾಗಿ ಆಲಿಯಾ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಕೋವಿಡ್ ಲಾಕ್ ಡೌನ್ ಘೋಷಣೆಯಾದಾಗಿನಿಂದ ನವಾಝುದ್ದೀನ್ ಸಿದ್ದಿಕಿ ತನ್ನ ಸ್ವಂತ ಊರಾದ ಬುಧಾನದಲ್ಲಿ ನೆಲೆಸಿದ್ದಾರೆ. ಆಲಿಯಾ ಹೇಳಿಕೆ ದಾಖಲಿಸಲು ಬಂದಾಗ ಸಿದ್ದಿಕಿ ಕುಟುಂಬಸ್ಥರು ಮನೆಯಲ್ಲಿ ಇರಲಿಲ್ಲ. ಅವರು ಡೆಹ್ರಾಡೂನ್ಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಅವಳು (ಆಲಿಯಾ) ನಮ್ಮಲ್ಲಿ ಯಾರನ್ನೂ ಭೇಟಿಯಾಗಲು ಬಂದಿಲ್ಲ ಎಂದು ಸಿದ್ದಿಕಿ ಕುಟುಂಬಸ್ಥರು ತಿಳಿಸಿದ್ದು, ತಮ್ಮ ಮೇಲಿನ ಆರೋಪಿಗಳನ್ನು ತಳ್ಳಿ ಹಾಕಿದ್ದಾರೆ.