ಮುಂಬೈ: ಬಾಲಿವುಡ್ ನಟ ನವಾಝುದ್ದೀನ್ ಸಿದ್ದಿಕಿ ಪತ್ನಿ ಆಲಿಯಾ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಬಗ್ಗೆ ಸಿದ್ದಿಕಿಗೆ ಆಲಿಯಾ ವಕೀಲರ ಮುಖಾಂತರ ನೋಟಿಸ್ ಕಳಿಸಿದ್ದು, ಆಲಿಯಾ ನೋಟಿಸ್ಗೆ ಸಿದ್ದಿಕಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಲಾಗಿದೆ. ಈ ಕುರಿತು ಆಲಿಯಾ ಪರ ವಕೀಲ ಮಾಹಿತಿ ನೀಡಿದ್ದು, ವಿವಾಹ ವಿಚ್ಛೇದನಕ್ಕೆ ಸಂಬಂಧಪಟ್ಟಂತೆ ನಮ್ಮ ಕಕ್ಷಿದಾರರಾದ ಆಲಿಯಾ ಸಿದ್ದಿಕಿ ಅವರು ನವಾಝುದ್ದೀನ್ ಸಿದ್ದಿಕಿ ಅವರಿಗೆ ಮೇ 7ರಂದು ನೋಟಿಸ್ ನೀಡಿದ್ದು, ಪ್ರಿತಿಕ್ರಿಯಿಸುವಂತೆ ತಿಳಿಸಿದ್ದಾರೆ. ಕೋವಿಡ್ ಹಿನ್ನೆಲೆ ಇ-ಮೇಲ್ ಮತ್ತು ವಾಟ್ಸ್ಆ್ಯಪ್ ಮುಖಾಂತರ ಅವರಿಗೆ ನೋಟಿಸ್ ನೀಡಲಾಗಿದೆ. ಅದಕ್ಕೆ ಸಿದ್ದಿಕಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿಸಿದ್ದಾರೆ.
ನಾವು ಕಳಿಸಿರುವ ನೋಟಿಸ್ ಬಗ್ಗೆ ಸಿದ್ದಿಕಿ ಮೌನವಾಗಿದ್ದಾರೆ. ವಿಚ್ಛೇಧನಕ್ಕೆ ಸಂಬಂಧಪಟ್ಟಂತೆ ಸಿದ್ದಿಕಿ ಅವರ ಅಭಿಪ್ರಾಯ ಕೇಳಲು ನಾವು ಬಯಸಿದ್ದೇವೆ. ಆದರೆ ಅವರು ನಮ್ಮ ನೋಟಿಸ್ನ್ನು ನಿರ್ಲಕ್ಷಿಸಿದ್ದಾರೆ. ಅವರ ವಿರುದ್ಧ ಕೆಲ ಗಂಭೀರ ಆರೋಪಗಳಿವೆ. ಅದು ಅವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಅತ್ಯಂತ ಸೂಕ್ಷ್ಮ ವಿಷಯಗಳಾಗಿವೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಲಿಯಾ, ಸಿದ್ದಿಕಿ ಮತ್ತು ನನ್ನ ನಡುವೆ ಒಂದಲ್ಲ ಹಲವಾರು ಸಮಸ್ಯೆಗಳಿವೆ. ಇಷ್ಟರವರೆಗೆ ನಾನು ಎಲ್ಲವನ್ನೂ ನಿಭಾಯಿಸಿಕೊಂಡು ಬಂದೆ. ಈಗ ಅದು ಸರಿಪಡಿಸಲಾಗದಂತ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಹೇಳಿದ್ದಾರೆ. ನವಾಝುದ್ದೀನ್ ಸಿದ್ದಿಕಿ ಮತ್ತು ಆಲಿಯಾ ವಿವಾಹವಾಗಿ ಹತ್ತು ವರ್ಷಗಳಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2017ರಲ್ಲಿ ಸಿದ್ದಿಕಿ- ಆಲಿಯಾ ದಾಂಪತ್ಯದಲ್ಲಿ ಬಿರುಕು ಉಂಟಾದ ಬಗ್ಗೆ ವದಂತಿಗಳು ಕೇಳಿ ಬಂದಿದ್ದವು . ಅದನ್ನು ದಂಪತಿ ತಳ್ಳಿ ಹಾಕಿದ್ದರು.