ಬೆಂಗಳೂರು: ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ 'ಕೋಟಿಗೊಬ್ಬ 3' ಸಿನಿಮಾ ರಾಜ್ಯಾದ್ಯಂತ ಇಂದು ಬಿಡುಗಡೆಯಾಗಬೇಕಿತ್ತು. ಇದಕ್ಕಾಗಿ ಮೊದಲ ದಿನದ ಟಿಕೆಟ್‌ಗಳನ್ನು ಪಡೆದಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ತಾಂತ್ರಿಕ ಕಾರಣದಿಂದ ಇಂದು ಬಿಡುಗಡೆ ಆಗಬೇಕಿದ್ದ ಸಿನಿಮಾವನ್ನು ನಾಳೆಗೆ ಮುಂದೂಡಲಾಗಿದೆ. ಇದರಿಂದ ರೊಚ್ಚಿಗೆದ್ದ ಕೆಲ ಅಭಿಮಾನಗಳು ಥಿಯೇಟರ್‌ಗೆ ಕಲ್ಲು ತೂರಾಟ ನಡೆಸಿದ್ದಾರೆ.
ಬೆಳ್ಳಂ ಬೆಳಗ್ಗೆಯೇ ಥಿಯೇಟರ್‌ಗಳ ಮುಂದೆ ಜಮಾಯಿಸಿದ್ದ ಅಭಿಮಾನಿಗಳ ಕೆಲಕಾಲ ತಾಳ್ಮೆಯಿಂದಲೇ ವರ್ತಿಸಿದ್ದಾರೆ. ಆದರೆ, ಯಾವಾಗ ಸಿನಿಮಾ ಪ್ರದರ್ಶನ ಕಾಣುವುದಿಲ್ಲ ಎಂಬ ವಿಚಾರಗೊತ್ತಾಯಿತೋ ಕೆಲವೆಡೆ ಅಭಿಮಾನಿಗಳು ತಮ್ಮ ಸಿಟ್ಟು ವ್ಯಕ್ತಪಡಿಸಿದ್ದಾರೆ.
ವಿಜಯಪುರದ ಡ್ರೀಮ್ ಲ್ಯಾಂಡ್ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಿದ್ದಕ್ಕೆ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರಮಂದಿರ ಮೇಲೆ ಕಲ್ಲು ತೂರಾಟ ನಡೆಸಿ, ಗ್ಲಾಸ್ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದರೆ, ಕೊಪ್ಪಳದಲ್ಲಿ ಚಿತ್ರಮಂದಿರದ ಎದುರು ಘೋಷಣೆಗಳನ್ನು ಕೂಗಿದ್ದಾರೆ. ಬೆಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯ ಹಲವೆಡೆ ಕಿಚ್ಚನ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು.
ಮೇಲ್ನೋಟಕ್ಕೆ ತಾಂತ್ರಿಕ ಕಾರಣಗಳಿಂದ ಇಂದು ಕೋಟಿಗೊಬ್ಬ-3 ಬಿಡುಗಡೆ ಆಗಿಲಿಲ್ಲ ಎಂದು ಹೇಳಲಾಗುತ್ತಿದೆ. ಆದ್ರೆ ಇದು ಉದ್ದೇಶಕ ಪೂರಕವಾಗಿಯೇ ಚಿತ್ರಕ್ಕೆ ತಡೆ ನೀಡಲಾಗಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ. ಸದ್ಯ ಚಿತ್ರ ರಿಲೀಸ್ ಆಗದೇ ಇರುವುದಕ್ಕೆ ವೈಯಕ್ತಿಕವಾಗಿ ಕ್ಷಮೆ ಕೋರಿರುವ ನಟ ಕಿಚ್ಚ ಸುದೀಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಚಿತ್ರದ ನಿರ್ಮಾಪಕ ಎಂಬಿ ಬಾಬು, ಕೆಲ ವಿತರಕರು ಮಾಡಿದ ಮೋಸದಿಂದ ಇಂದು ಕೋಟಿಗೊಬ್ಬ- 3 ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ, ಹಲವಾರು ಕಾರಣಗಳಿವೆ. ಷಡ್ಯಂತ್ರಗಳನ್ನು ರೂಪಿಸಿದ್ದಾರೆ. ದಯಮಾಡಿ ನನ್ನನ್ನು ಕ್ಷಮಿಸಿ. ನಾಳೆಯಿಂದ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ನನ್ನದು ಯಾವುದೇ ತಪ್ಪುಗಳು ಇಲ್ಲ ಎಂದಿದ್ದಾರೆ.
ಒಟ್ಟಿನಲ್ಲಿ ವಿತರಕರ ಮೋಸವೋ, ತಾಂತ್ರಿಕ ಕಾರಣವೋ ಏನೇ ಇರಲಿ. ನಾಳೆಯಾದರೂ ಕೋಟಿಗೊಬ್ಬ-3 ಭರ್ಜರಿಯಾಗಿ ಬಿಡುಗಡೆಯಾಗುವ ಮೂಲಕ ಕಿಚ್ಚನ ಅಭಿಮಾನಿಗಳಿಗೆ ಭರಪೂರ ಮನರಂಜನೆ ಉಣಬಡಿಸಲಿ.