ಮುಂಬೈ: ಸರ್ದಾರ್ ಉದಮ್ ಸಿಂಗ್ ಸಿನಿಮಾದಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ಅಸಾಧಾರಣ ಅಭಿನಯಕ್ಕೆ ಗೆಳತಿ ಹಾಗೂ ನಟಿ ಕತ್ರಿನಾ ಕೈಫ್ ಸೇರಿದಂತೆ ಅನೇಕ ವಿಮರ್ಶಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸಂಜೆ ನಾಯಕ, ನಟ ವಿಕಿ ಕೌಶಲ್ ಸರ್ದಾರ್ ಉದಮ್ ಚಿತ್ರದ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಿದ್ದರು. ಈ ವೇಳೆ, ಕತ್ರಿನಾ ಕೈಫ್ ಸೇರಿದಂತೆ ಅನೇಕ ನಟ - ನಟಿಯರು ಹಾಜರಿದ್ದರು. ಸಮಾರಂಭದಲ್ಲಿ ಕೈಫ್ ಲ್ಯಾವೆಂಡರ್ ಬಣ್ಣದ ಜಾಕೆಟ್ ತೊಟ್ಟು ಡೆನಿಮ್ ಮಿನಿ ಸ್ಕರ್ಟ್ನಲ್ಲಿ ಮಿಂಚಿದರು.
ಶೂಜಿತ್ ಸರ್ಕಾರ್, ಅದ್ಭುತವಾದ ದೃಷ್ಟಿಕೋನವನ್ನು ಇಟ್ಟುಕೊಂಡು ಯಾವುದೇ ಕಲಬೆರಿಕೆ ಇಲ್ಲದೇ ಸುಂದರವಾದ ಕಥೆಯನ್ನು ರಚಿಸಿ ಸಿನಿಮಾವಾಗಿ ರೂಪಿಸಿದ್ದಾರೆ. ವಿಕ್ಕಿ ಕೌಶಲ್ ಶುದ್ಧ ಪ್ರತಿಭೆ, ಪ್ರಾಮಾಣಿಕ, ಹೃದಯ ವಿದ್ರಾವಕವಾಗುವಂತೆ ನಟಿಸಿದ್ದಾರೆ ಎಂದು ಚಿತ್ರದ ಪ್ರದರ್ಶನ ವೀಕ್ಷಿಸಿದ ಬಳಿಕ ಕತ್ರಿನಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.

ನಟಿ ಕತ್ರಿನಾ ಕೈಫ್ ಜೊತೆ ವಿಕ್ಕಿ ಸ್ನೇಹಕ್ಕೂ ಮಿಗಿಲಾದ ಬಾಂಧವ್ಯ ಹೊಂದಿದ್ದಾರೆ ಎಂದು ಬಾಲಿವುಡ್ ಅಂಗಳದಲ್ಲಿ ಗಾಸಿಪ್ಗಳು ಕೇಳಿ ಬರುತ್ತಿವೆ. ಆದರೆ, ಈ ಕುರಿತಂತೆ ಕೈಫ್ ಆಗಲಿ, ವಿಕ್ಕಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನು, ಸರ್ದಾರ್ ಉದಮ್ ಸಿಂಗ್ ಸಿನಿಮಾ 1919ರಲ್ಲಿ ಅಮೃತಸರದ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಸ್ವಾತಂತ್ರ್ಯ ಪೂರ್ವ ಭಾರತದ ಪಂಜಾಬ್‌ನ ಮಾಜಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಮೈಕೆಲ್ ಒ ಡ್ವಯರ್ ನನ್ನು ಕೊಂದಿದ್ದ ಹುತಾತ್ಮ ಉದಮ್ ಸಿಂಗ್ ಅವರ ಕಥೆಯನ್ನೇ ತೆರೆ ಮೇಲೆ ತರಲಾಗುತ್ತಿದೆ.
ಉದಮ್ ಸಿಂಗ್ ಅವರನ್ನು 1940ರ ಜುಲೈನಲ್ಲಿ ಗಲ್ಲಿಗೇರಿಸಲಾಯಿತು. ಸರ್ದಾರ್ ಉದಮ್ ಸಿನಿಮಾವನ್ನು ಅ.16ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ವಿಡಿಯೋ.. BTFW 2021: ಮನಮೋಹಕ ವಧುವಿನ ಬಟ್ಟೆ ತೊಟ್ಟು ಕ್ಯಾಟ್ ವಾಕ್ ಮಾಡಿದ ನಟಿ