ಕೆಲವು ದಿನಗಳ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣ, ನೆಪೋಟಿಸಂ ಹಾಗೂ ಡ್ರಗ್ಸ್ ಪ್ರಕರಣಕ್ಕೆ ಸುದ್ದಿಯಲ್ಲಿದ್ದ ಬಾಲಿವುಡ್ ಇದೀಗ ಮತ್ತೆ ಸುದ್ದಿಯಲ್ಲಿದೆ. ಬಾಲಿವುಡ್ನ ಕೆಲವು ಸ್ಟಾರ್ಗಳ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದು ಈಗ ಎಲ್ಲರ ಚಿತ್ತ ಬಾಲಿವುಡ್ನತ್ತ ಹರಿದಿದೆ.
ಇದನ್ನೂ ಓದಿ: ಕಿರುತೆರೆಯಲ್ಲಿ ಪುನೀತ್ ನಿರ್ಮಾಣದ ಹೊಸ ಧಾರಾವಾಹಿ ಆರಂಭ
ನಟಿ ತಾಪ್ಸಿ ಪನ್ನು, ನಿರ್ದೇಶಕ ಅನುರಾಗ್ ಕಶ್ಯಪ್, ಕ್ವೀನ್ ನಿರ್ಮಾಪಕ ವಿಕಾಸ್ ಬೆಹಲ್, ಮಧು ಮಂತೇನಾ ಸೇರಿ ಇನ್ನಿತರ ನಟ-ನಟಿಯರು, ನಿರ್ಮಾಪಕರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮಧು ಮಂತೇನಾ 'ಕ್ವಾನ್' ಮ್ಯಾನೇಜ್ಮೆಂಟ್ ಕಂಪನಿ ಕಚೇರಿಯನ್ನು ಕೂಡಾ ಐಟಿ ಅಧಿಕಾರಿಗಳು ಶೋಧಿಸಿದ್ದಾರೆ. ಆದರೆ ಈ ಐಟಿ ದಾಳಿಗೆ ಕಾರಣ ಏನು ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ. ತಾಪ್ಸಿ ಹಾಗೂ ಅನುರಾಗ್ ಕಶ್ಯಪ್ ಇಬ್ಬರೂ 'ಮನ್ಮರ್ಜಿಯಾನ್' ಸಿನಿಮಾದಿಂದ ಬಹಳ ಆತ್ಮೀಯ ಸ್ನೇಹಿತರು. 2 ವರ್ಷಗಳ ಹಿಂದೆ ಅನುರಾಗ್ ಕಶ್ಯಪ್ ಮೇಲೆ ಮಿ-ಟೂ ಆರೋಪ ಕೇಳಿಬಂದಾಗ ಕೂಡಾ ತಾಪ್ಸಿ ಪನ್ನು ಅನುರಾಗ್ ಕಶ್ಯಪ್ ಪರ ನಿಂತಿದ್ದರು. ಇದೀಗ ಇಬ್ಬರ ಮನೆ ಮೇಲೆ ಒಟ್ಟಿಗೆ ಐಟಿ ದಾಳಿ ಆಗಿರುವುದು ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ. ಇವರೆಲ್ಲರ ಮನೆ ಮೇಲೆ ಐಟಿ ದಾಳಿ ಆಗಿರುವುದು ಇತರ ಬಾಲಿವುಡ್ ಸೆಲಬ್ರಿಟಿಗಳು ಭಯದಿಂದ ಬದುಕುವಂತಾಗಿದೆ. ಇದಕ್ಕೂ ಮುನ್ನ ವಿಕಾಸ್ ಬೆಹಲ್ ಅನುರಾಗ್ ಕಶ್ಯಪ್ ಪ್ರೊಡಕ್ಷನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಯುವತಿಯೊಬ್ಬರು ವಿಕಾಶ್ ಬೆಹಲ್ ಮೇಲೆ ಮಿ ಟೂ ಆರೋಪ ಹೊರಿಸಿದಾಗ ಅನುರಾಗ್ ಆತನನ್ನು ತಮ್ಮ ಕಂಪನಿಯಿಂದ ಹೊರ ಕಳಿಸಿದ್ದರು.