ಚಂಡೀಗಢ: ಬೀಯಿಂಗ್ ಹ್ಯೂಮನ್ ಕಂಪನಿಯಲ್ಲಿನ ಅವ್ಯವಹಾರ ಸಂಬಂಧ ಬಾಲಿವುಡ್ ನಟ ಸಲ್ಮಾನ್ ಖಾನ್, ಸಹೋದರಿ ಅಲ್ವಿರಾ ಹಾಗೂ ಇತರೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಚಂಡೀಗಢದ ಮಣಿಮಾಜ್ರಾ ಮೂಲದ ಉದ್ಯಮಿ ಅರುಣ್ ಗುಪ್ತಾ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಳ್ಳಲಾಗಿದೆ. ಅರುಣ್ ಗುಪ್ತಾ ಎಂಬುವರು ಶೋ ರೂಂ ತೆರೆದು ಬೀಯಿಂಗ್ ಹ್ಯೂಮನ್ ಬ್ರಾಂಡ್‌ನ ವಸ್ತ್ರಗಳಿಗಾಗಿ 3 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ದೆಹಲಿಯಿಂದ ವಸ್ತುಗಳನ್ನು ಕಳುಹಿಸಿಕೊಟ್ಟಿಲ್ಲ. ಕಂಪನಿಯ ವೆಬ್‌ಸೈಟ್ ಕೂಡ ಸರಿಯಾಗಿ ನಿರ್ವಹಿಸುತ್ತಿಲ್ಲ. ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಸಂಸ್ಥೆ ಕೋಟಿ ಕೋಟಿ ಹಣ ವಂಚಿಸಿದೆ ಎಂದು ಗುಪ್ತಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಟ ಸಲ್ಮಾನ್ ಖಾನ್, ಅವರ ಸಹೋದರಿ ಅಲ್ವಿರಾ, ಬೀಯಿಂಗ್ ಹ್ಯೂಮನ್ ಸಿಇಒ ಪ್ರಕಾಶ್ ಕಪರೆ ಹಾಗೂ ಕಂಪನಿಯ ಇತರೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದಾರೆ. ಶೋ ರೂಂ ತೆರೆಯುವಂತೆ ಸಲ್ಮಾನ್ ಖಾನ್ ಅವರೇ ತಿಳಿಸಿದ್ದರು ಎಂದು ಉದ್ಯಮಿ ಅರುಣ್ ಗುಪ್ತಾ ಹೇಳಿದ್ದಾರೆ.