ಬಾಲಿವುಡ್ ಎವರ್ಗ್ರೀನ್ ನಟ ಧರ್ಮೇಂದ್ರ ನೆಟ್ಟಿಗರ ಜತೆ ಸೇರಿ ತಮ್ಮ ಪತ್ನಿ ಹೇಮಾ ಮಾಲಿನಿ ಅವರನ್ನು ರೇಗಿಸಿದ್ದಾರೆ.
ಮಥುರಾ ಸಂಸದೆ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಕಸ ಗುಡಿಸುತ್ತಿದ್ದ ವಿಡಿಯೋ ಸಾಕಷ್ಟು ಟ್ರೋಲ್ ಆಗಿತ್ತು. ಸಂಸತ್ ಭವನದ ಎದುರು ನಟಿ ಕಮ್ ರಾಜಕಾರಣಿ ಹೇಮಾ ಮಾಲಿನಿ ಕಸ ಗುಡಿಸಲು ಹರಸಾಹಸ ಪಟ್ಟಿದ್ದರು. ಉದ್ದನೆಯ ಪೊರಕೆ ಜತೆ ಯುದ್ಧಕ್ಕೆ ಇಳಿದವರಂತೆ ಅವರು ಕಂಡುಬಂದಿದ್ದರು. ಇವರ ಜತೆಗಿದ್ದವರು ಸಲೀಸಾಗಿ ಕಸ ಹೊಡೆಯುತ್ತಿದ್ದರೆ ಇವರು ಮಾತ್ರ ಪೊರಕೆಯನ್ನು ಸಂಭಾಳಿಸುವುದರಲ್ಲೇ ನಿರತರಾಗಿದ್ದಿದ್ದು ವಿಡಿಯೋದಲ್ಲಿ ಗೋಚರಿಸುತ್ತಿತ್ತು. ಇದನ್ನೆಲ್ಲಾ ಗಮನಿಸಿದ ನೆಟ್ಟಿಗರು ಹೇಮಾ ವಿರುದ್ಧ ಮುಗಿಬಿದ್ದು, ಹಾಸ್ಯಾಸ್ಪದವಾಗಿ ಟ್ರೋಲ್ ಮಾಡಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಡ್ರೀಮ್ ಗರ್ಲ್ಗೆ ಮುಜುಗರನ್ನುಂಟು ಮಾಡುವ ಬಗೆ ಬಗೆಯ ಪ್ರಶ್ನೆಗಳನ್ನು ಕೇಳಲಾಗಿತ್ತು. ಅಷ್ಟೇ ಅಲ್ಲದೆ ಇವರ ಪತಿ, ಬಾಲಿವುಡ್ ಮೇರು ನಟ ಧರ್ಮೇಂದ್ರ ಅವರಿಗೂ ಕೂಡ 'ಸರ್ ನಿಮ್ಮ ಪತ್ನಿ ಮನೆಯಲ್ಲಾದರೂ ಪೊರಕೆ ಹಿಡಿದು ಕಸ ಗುಡಿಸಿದ್ದಾರಾ' ಎಂದು ಸೋಷಿಯಲ್ ಮೀಡಿಯಾ ಮಂದಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಕೊಂಚ ಫನ್ನಿಯಾಗೇ ರಿಯಾಕ್ಟ್ ಮಾಡಿರುವ ಧರ್ಮೇಂದ್ರ, ಅವರು 'ಸಿನಿಮಾದಲ್ಲಿ ಪೊರಕೆ ಹಿಡಿಯುತ್ತಿದ್ದರು, ಯಾವುದೇ ನಾಜೂಕಿಲ್ಲದೇ ನನಗೂ ಕೂಡ ಹಿಡಿಯುತ್ತಿದ್ದರು' ಎಂದಿದ್ದಾರೆ. ಇದರ ಜತೆಗೆ ಬಾಲ್ಯದಲ್ಲಿ ನನ್ನ ತಾಯಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ನಾನೂ ಕೂಡ ಕಸ ಗುಡಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.