ಮುಂಬೈ: ಬಾಲಿವುಡ್ ನಟ ದರ್ಶನ್ ಕುಮಾರ್ ತಮ್ಮ ಹೊಸ ಚಿತ್ರಕ್ಕಾಗಿ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾದಲ್ಲಿ ಆರ್. ಮಾಧವನ್ ಹಾಗೂ ಅಪರ್ಶಕ್ತಿ ಖುರಾನಾ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಕಥೆ ಬಹಳ ಚೆನ್ನಾಗಿದೆ. ಈ ಸಿನಿಮಾ ಮೂಲಕ ಈ ವರ್ಷ ಬಹಳ ಉತ್ತಮವಾಗಿ ಆರಂಭವಾಗಿದೆ ಎಂದು ದರ್ಶನ್ ಹೇಳಿದ್ದಾರೆ.
ಇದನ್ನೂ ಓದಿ: ಪೋಸ್ಟರ್ ನೋಡಿ ಇದು ವರ್ಸ್ಟ್ ಸಿನಿಮಾ ಅಂತಾ ಕಾಣುತ್ತೆ ಅಂದ್ರು ಪುನೀತ್..
ಎನ್ಹೆಚ್10, ಮೇರಿಕೋಮ್, ಸರಬ್ಜಿತ್, ಬಾಘಿ2 ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ದರ್ಶನ್ ತಮ್ಮ ಹೊಸ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ. "ಈ ಹೊಸ ವರ್ಷ ನನಗೆ ಒಳ್ಳೆ ರೀತಿಯಲ್ಲಿ ಆರಂಭವಾಗಿದೆ. ಹೊಸ ಪ್ರಾಜೆಕ್ಟ್ಗೆ ಚಿತ್ರೀಕರಣ ಆರಂಭವಾಗಿದೆ" ಎಂದು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. "ಮಾಧವನ್ ಹಾಗೂ ಅಪರ್ಶಕ್ತಿ ಖುರಾನ ಅವರಂಥ ದೊಡ್ಡ ನಟರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ" ಎಂದು ಕೂಡಾ ದರ್ಶನ್ ಹೇಳಿಕೊಂಡಿದ್ದಾರೆ. "ನೀವು ಒಪ್ಪಿಕೊಳ್ಳುವ ಸ್ಕ್ರಿಪ್ಟ್ ಚೆನ್ನಾಗಿದ್ದರೆ ಸಿನಿಮಾ ಕೂಡಾ ಅದ್ಭುತವಾಗಿರುತ್ತದೆ. ಅದರಲ್ಲೂ ಅನುಭವಿ ನಟರಿದ್ದರೆ ಆ ಸಿನಿಮಾ ಯಶಸ್ವಿಯಾಗುವುದು ಖಂಡಿತ. ಚಿತ್ರರಂಗದ ಉತ್ತಮ ನಟರಲ್ಲಿ ಮಾಧವನ್ ಕೂಡಾ ಒಂದು. ಅವರೊಂದಿಗೆ ತೆರೆ ಹಂಚಿಕೊಳ್ಳಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಅಪರ್ಶಕ್ತಿ ಖುರಾನ ಕೂಡಾ ಉತ್ತಮ ನಟರು. ನನ್ನೊಂದಿಗೆ ಕುಶಾಲಿ ಕುಮಾರ್ ನಟಿಸುತ್ತಿದ್ದು ಈಕೆಗೆ ಇದು ಮೊದಲ ಸಿನಿಮಾ. ಸಿನಿಮಾ ಯಶಸ್ವಿಯಾಗುವ ನಂಬಿಕೆ ಇದೆ " ಎಂದು ಹೇಳಿಕೊಂಡಿದ್ದಾರೆ.