ನವದೆಹಲಿ: ಪತ್ನಿಯ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆ ನಡೆಸಿದ ಕೌಟುಂಬಿಕ ಆರೋಪ ಎದುರಿಸುತ್ತಿರುವ ಬಾಲಿವುಡ್ ರ‍್ಯಾಪರ್ ಮತ್ತು ನಟ ಯೋ ಯೋ ಹನಿ ಸಿಂಗ್ ವರ್ತನೆಗೆ ಇಲ್ಲಿನ ನ್ಯಾಯಾಲಯ ತೀವ್ರ ತರಾಟೆ ತೆಗೆದುಕೊಂಡಿದೆ. ಜೊತೆಗೆ ಇದು ಕೊನೆಯ ಎಚ್ಚರಿಕೆ ಎಂದು ದೆಹಲಿ ಹಜಾರಿ ಕೋರ್ಟ್ ವಾರ್ನ್ ಮಾಡಿದೆ.
ಕೌಟುಂಬಿಕ ದೌರ್ಜನ್ಯ ಪ್ರಕರಣ ಸಂಬಂಧ ಹನಿ ಸಿಂಗ್ ಇಂದು ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ, ವೈದ್ಯಕೀಯ ಕಾರಣಗಳನ್ನು ಕೊಟ್ಟಿರುವ ಹನಿ ಸಿಂಗ್, ವಿಚಾರಣೆಗೆ ಹಾಜರಾಗುವುಕ್ಕೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆರೋಪಿಯು ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದಕ್ಕೆ ದೆಹಲಿ ಕೋರ್ಟ್ ಶನಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಎಲ್ಲರಿಗಿಂತ ಕಾನೂನು ದೊಡ್ಡದು. ಯಾರೇ ಆಗಲಿ ಕಾನೂನಿಗೆ ತಲೆ ಬಾಗಲೇಬೇಕು ಎಂದು ತರಾಟೆ ತೆಗೆದುಕೊಂಡಿರುವ ನ್ಯಾಯಾಲಯ, ಸಿಂಗ್ ಅವರ ವೈದ್ಯಕೀಯ ವರದಿ ಮತ್ತು ಅವರ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ಯೋ ಯೋ ಹನಿ ಸಿಂಗ್ ಪರ ವಕೀಲರಿಗೆ ಸೂಚಿಸಿದೆ. ಮುಂದಿನ ವಿಚಾರಣೆಯ ದಿನಾಂಕದಂದು ಹಾಜರಾಗುವುದಾಗಿ ಸಿಂಗ್ ಅವರ ವಕೀಲರು ಈ ವೇಳೆ ನ್ಯಾಯಾಲಯಕ್ಕೆ ಭರವಸೆ ನೀಡಿದರು. ನ್ಯಾಯಾಲಯ ಈ ವೇಳೆ ಕೊನೆಯ ಅವಕಾಶ ಮಾಡಿಕೊಟ್ಟಿದೆ.
ಪತಿ ಹನಿ ಸಿಂಗ್ ತನ್ನ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪತ್ನಿ ಶಾಲಿನಿ ತಲ್ವಾರ್ ಆತನ ವಿರುದ್ಧ ಕೌಟುಂಬಿಕ ದೌರ್ಜನ್ಯ ದೂರು ನೀಡಿದ್ದರು. ಅಲ್ಲದೇ ಪತಿಯಿಂದ ರಕ್ಷಣೆ ಕೋರಿ ದೆಹಲಿಯ ಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ ಕುರಿತು ಆಗಸ್ಟ್ 3 ರಂದು ಹನಿ ಸಿಂಗ್ ಅವರಿಗೆ ನೋಟಿಸ್ ನೀಡಿದ್ದ ನ್ಯಾಯಾಲಯವು ಜಂಟಿ ಒಡೆತನದ ಆಸ್ತಿಯನ್ನು ವರ್ಗಾಯಿಸದಂತೆ ಸೂಚನೆ ನೀಡಿತ್ತು.
2011ರ ಜನವರಿ 23 ರಂದು ಗುಪ್ತವಾಗಿ ಮದುವೆಯಾದ ಹನಿ ಸಿಂಗ್ ಹಾಗೂ ಶಾಲಿನಿ ತಲ್ವಾರ್ ದಂಪತಿ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸುವ ಮೂಲಕ ಬಾಲಿವುಡ್ನ ನಟಿ-ನಟಿಯರಿಗೆ ಅಚ್ಚರಿ ಮೂಡಿಸಿದ್ದರು. ಆದರೆ, ಇತ್ತೀಚೆಗೆ ತನ್ನ ಪತಿ ದೈಹಿಕ ಮತ್ತು ಮಾನಸಿಕ ಹಲ್ಲೆ ಮಾಡುತ್ತಿದ್ದಾರೆ. ಸಾಲದೆಂಬಂತೆ ಅವರು ಪರಸ್ತ್ರೀ ಜೊತೆ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ ಪತ್ನಿ ಶಾಲಿನಿ ಸ್ಥಳೀಯ ಕೋರ್ಟ್ ಮೊರೆ ಹೋಗಿದ್ದರು.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿಯಲ್ಲಿ ತನಗೆ 10 ಕೋಟಿ ಪರಿಹಾರ ನೀಡಬೇಕು. ಇಲ್ಲವೇ ಒಬ್ಬಂಟಿಯಾದ ನನಗೆ ದೆಹಲಿಯಲ್ಲಿ ಸಂಪೂರ್ಣ ಸುಸಜ್ಜಿತ ವಸತಿಗಾಗಿ ತಿಂಗಳು 5 ಲಕ್ಷ ರೂ.ಗಳ ಬಾಡಿಗೆಯನ್ನು ಪಾವತಿಸುವಂತೆ ನ್ಯಾಯಾಲಯದಲ್ಲಿ ಶಾಲಿನಿ ಮನವಿ ಮಾಡಿಕೊಂಡಿದ್ದರು. ಆದರೆ, ಹನಿ ಸಿಂಗ್ ತನ್ನ ಪತ್ನಿ ಮಾಡಿರುವ ಆರೋಪಗಳನ್ನು ನಿರಾಕರಿಸಿದ್ದಾರೆ.