ಚಿತ್ರರಂಗದಲ್ಲಿ ಬಯೋಪಿಕ್ ಮಾಡುವುದು ಇತ್ತೀಚೆಗೆ ಟ್ರೆಂಡ್ ಆಗಿದೆ. ಹೀಗೆ ಬಿಡುಗಡೆಯಾದ ಬಹುತೇಕ ಸಿನಿಮಾಗಳು ಹಿಟ್ ಕೂಡಾ ಆಗಿವೆ. ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಜೀವನ ಕೂಡಾ ಇದೀಗ ತೆರೆ ಮೇಲೆ ಸಿನಿಮಾವಾಗಿ ಬರಲಿದೆ. ಬಾಲಿವುಡ್ನಲ್ಲಿ ಈ ಬಯೋಪಿಕ್ ತಯಾರಾಗುತ್ತಿದ್ದು ಚಿತ್ರವನ್ನು ಆನಂದ್ ಎಲ್.ರಾಯ್ ನಿರ್ದೇಶಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನೂ ಹೆಸರಿಡದ ಈ ಚಿತ್ರವನ್ನು ಕಲರ್ ಎಲ್ಲೋ ಪ್ರೊಡಕ್ಷನ್ಸ್ ಹಾಗೂ ಸನ್ ಡಯಲ್ ಎಂಟರ್ಟೈನ್ಮೆಂಟ್ ಸಂಸ್ಥೆ ಜೊತೆ ಸೇರಿ ನಿರ್ಮಿಸುತ್ತಿ ದೆ. ಖ್ಯಾತ ಸಿನಿ ವಿಶ್ಲೇಷಕ ತರಣ್ ಆದರ್ಶ್ ಈ ವಿಚಾರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಆನಂದ್ ಎಲ್. ರಾಯ್ 'ಅತ್ರಾಂಗಿ ರೇ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್, ಧನುಷ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ನಂತರ ಆನಂದ್ ಎಲ್.ರಾಯ್, ವಿಶ್ವನಾಥನ್ ಆನಂದ್ ಬಯೋಪಿಕ್ನಲ್ಲಿ ಬ್ಯುಸಿಯಾಗಲಿದ್ದಾರೆ. ಆನಂದ್ ಬಯೋಪಿಕ್ನಲ್ಲಿ ಅವರ ಪಾತ್ರವನ್ನು ಯಾರು ಮಾಡುತ್ತಿದ್ದಾರೆ ಎಂಬ ವಿಚಾರ ಇನ್ನೂ ತಿಳಿದುಬಂದಿಲ್ಲ. ಚಿತ್ರಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಪ್ರಕಟಿಸಿಲ್ಲ.
ಇದನ್ನೂ ಓದಿ: ಕಸ ನಿರ್ವಹಣೆಗೆ ಶುಲ್ಕ ಬೇಡ ಎಂದು ಬಿಬಿಎಂಪಿಗೆ ಅನಿರುದ್ಧ್ ಮನವಿ
ಆದರೆ ಕೆಲವರು ಮಾತ್ರ ಈ ಚಿತ್ರದಲ್ಲಿ ಆನಂದ್ ಪಾತ್ರದಲ್ಲಿ ನಟಿಸಲು ಅಭಿಷೇಕ್ ಬಚ್ಚನ್ ಸರಿ ಹೊಂದುತ್ತಾರೆ. ಅಲ್ಲದೆ ಚಿತ್ರಕ್ಕೆ 'ಗ್ರ್ಯಾಂಡ್ ಮಾಸ್ಟರ್' ಎಂಬ ಹೆಸರಿಡಬಹುದು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಮತ್ತೊಂದು ಮೂಲಕಗಳ ಪ್ರಕಾರ ಈ ಚಿತ್ರಕ್ಕೆ ಧನುಷ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಕೆಂದರೆ ವಿಶ್ವನಾಥನ್ ಆನಂದನ್ ತಮಿಳುನಾಡಿಗೆ ಸೇರಿದವರು. ಜೊತೆಗೆ ಧನುಷ್ ವಿಶ್ವನಾಥನ್ ಅವರ ದೊಡ್ಡ ಅಭಿಮಾನಿಯಂತೆ. ಎಲ್ಲಕ್ಕಿಂತ ಹೆಚ್ಚಾಗಿ ಧನುಷ್ ಮೇಲೆ ಆನಂದ್ ಎಲ್. ರಾಯ್ ಅವರಿಗೆ ಬಹಳ ನಂಬಿಕೆ ಕೂಡಾ ಇದೆಯಂತೆ. ಆದರೆ ಚಿತ್ರಕ್ಕೆ ಕೊನೆಗೆ ಯಾರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ.