ಮುಂಬೈ: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಬಾಲಿವುಡ್ ಸೆಲೆಬ್ರಿಟಿಗಳು ಕೋವಿಡ್ ಸುಳಿಯಲ್ಲಿ ಸಿಲುಕುತ್ತಿದ್ದು, ಇದೀಗ ನಟ ವಿಕ್ಕಿ ಕೌಶಲ್ ಹಾಗೂ ನಟಿ ಭೂಮಿ ಪೆಡ್ನೇಕರ್ಗೆ ಸೋಂಕು ತಗುಲಿರುವುದು ದೃಢವಾಗಿದೆ.
ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. "ಎಲ್ಲಾ ಕಾಳಜಿ ಮತ್ತು ಮುನ್ನೆಚ್ಚರಿಕೆಗಳ ಹೊರತಾಗಿಯೂ, ದುರದೃಷ್ಟವಶಾತ್ ನನಗೆ ಕೋವಿಡ್ ತಗುಲಿದೆ. ಅಗತ್ಯ ಕ್ರಮಗಳನ್ನು ಅನುಸರಿಸಿ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ವೈದ್ಯರು ಸೂಚಿಸಿದ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ತಕ್ಷಣವೇ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ವಿನಂತಿಸುತ್ತೇನೆ. ಎಲ್ಲರೂ ಕಾಳಜಿ ವಹಿಸಿ ಮತ್ತು ಸುರಕ್ಷಿತವಾಗಿರಿ" ಎಂದು ವಿಕ್ಕಿ ಕೌಶಲ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಸೆಲೆಬ್ರಿಟಿಗಳಿಗೆ ಸೋಂಕು: ನಟ ಗೋವಿಂದಗೂ ಕೊರೊನಾ ದೃಢ..
"ನನ್ನ ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಸೌಮ್ಯ ಲಕ್ಷಣಗಳಿವೆ. ಆದರೆ ನಾನು ಆರೋಗ್ಯವಾಗಿದ್ದು, ಐಸೋಲೇಷನ್ಗೆ ಒಳಪಟ್ಟಿರುವೆ. ವೈದ್ಯರ ಸಲಹೆಯನ್ನು ಪಾಲಿಸುತ್ತಿರುವೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ" ಎಂದು ಭೂಮಿ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ನಲ್ಲಿ ಬರೆದಿದ್ದಾರೆ. ಪ್ರಸ್ತುತ ಪರಿಸ್ಥಿತಿಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಮಾಸ್ಕ್ ಧರಿಸಿ, ಆಗಾಗ ನಿಮ್ಮ ಕೈಗಳನ್ನು ತೊಳೆಯುತ್ತಿರಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ನಟಿ ಮನವಿ ಮಾಡಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಅಮೀರ್ ಖಾನ್, ಅಕ್ಷಯ್ ಕುಮಾರ್, ಗೋವಿಂದ, ಆಲಿಯಾ ಭಟ್, ರಣಬೀರ್ ಕಪೂರ್, ಕಾರ್ತಿಕ್ ಆರ್ಯನ್, ಸಂಜಯ್ ಲೀಲಾ ಭನ್ಸಾಲಿ ಸೇರಿದಂತೆ ಹಲವರಿಗೆ ವೈರಸ್ ಅಂಟಿದೆ.