ರಾಘವ ಲಾರೆನ್ಸ್ ನಿರ್ದೇಶಿಸಿ ನಟಿಸಿರುವ 'ಕಾಂಚನ' ಸಿನಿಮಾ ಸರಣಿ ತಮಿಳು ಮಾತ್ರವಲ್ಲದೆ ತೆಲುಗಿನಲ್ಲೂ ಹಿಟ್ ಆಗಿದೆ. ಈ ಸಿನಿಮಾವನ್ನು ಕನ್ನಡದಲ್ಲಿ 'ಕಲ್ಪನ' ಹೆಸರಲ್ಲಿ ರೀಮೇಕ್ ಮಾಡಲಾಗಿತ್ತು. ಉಪೇಂದ್ರ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.
ಇತ್ತೀಚೆಗೆ 'ಕಾಂಚನ 3' ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ದೊರಕಿದೆ. ಇನ್ನು ಕನ್ನಡದಲ್ಲಿ ಈ ಬಾರಿ ಡಬ್ ಮಾಡಿ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ. ಇದೀಗ ಕಾಂಚನ ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದೆ. ಈ ಸಿನಿಮಾಗೆ 'ಲಕ್ಷ್ಮಿಬಾಂಬ್' ಎಂದು ಹೆಸರಿಡಲಾಗಿದ್ದು, ಅಕ್ಷಯ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ 'ಕಾಂಚನ' ಚಿತ್ರದಲ್ಲಿ ಹಿರಿಯ ನಟ ಶರತ್ ಕುಮಾರ್ ಮಂಗಳಮುಖಿ ಪಾತ್ರದಲ್ಲಿ ನಟಿಸಿದ್ದು, ಕನ್ನಡದಲ್ಲಿ ಸಾಯಿಕುಮಾರ್ ಆ ಪಾತ್ರ ನಿಭಾಯಿಸಿದ್ದರು. ಹಿಂದಿಯಲ್ಲಿ ಆ ಪಾತ್ರವನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಇದುವರೆಗೂ ಅಮಿತಾಬ್ ಇಂತಹ ಪಾತ್ರದಲ್ಲಿ ನಟಿಸಿಲ್ಲ. ಒಂದು ವೇಳೆ ಅಂದುಕೊಂಡಂತೆ ಆದಲ್ಲಿ ತೆರೆ ಮೇಲೆ ಅಮಿತಾಬ್ ಮಂಗಳಮುಖಿಯಾಗಿ ಹೇಗೆ ಕಾಣುತ್ತಾರೆ ಎಂಬ ಕುತೂಹಲ ಸಿನಿಮಾ ಬಿಡುಗಡೆ ಆಗುವರೆಗೂ ಇರುವುದು ಗ್ಯಾರಂಟಿ.
ಇನ್ನು ಈ ಸಿನಿಮಾವನ್ನು ರಾಘವ ಅವರೇ ನಿರ್ದೇಶಿಸಲಿದ್ದು, ಈ ಮೂಲಕ ರಾಘವ ಲಾರೆನ್ಸ್ ಬಾಲಿವುಡ್ಗೆ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಕ್ಷಯ್ ಕುಮಾರ್ಗೆ ನಾಯಕಿಯರಾಗಿ ಕೈರಾ ಅಡ್ವಾಣಿ ನಟಿಸಲಿದ್ದಾರೆ. ಮಾಧವನ್, ಶೋಭಿತ ಕೂಡಾ ಸಿನಿಮಾದಲ್ಲಿರುತ್ತಾರೆ. ಇನ್ನು ಶೂಟಿಂಗ್ ಶೀಘ್ರವೇ ಆರಂಭವಾಗಲಿದ್ದು, ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ.