ಮುಂಬೈ: ಆರ್ಯನ್ ಖಾನ್ ಆರೋಪಿಯಾಗಿರುವ ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್ ಸೈಲ್ ಭಾನುವಾರ ಲಂಚ ಬೇಡಿಕೆಯ ಬಗ್ಗೆ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಈ ಬಗ್ಗೆ ಸೈಲ್ ವಿಡಿಯೋವೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದ ಸ್ವತಂತ್ರ ಸಾಕ್ಷಿ ಪ್ರಭಾಕರ್ ರಘೋಜಿ ಸೈಲ್, NCB ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮತ್ತು ಇತರರು ಆರ್ಯನ್ ಖಾನ್ ಅವರನ್ನು ಬಿಡುಗಡೆ ಮಾಡಲು ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರಿಂದ 25 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಆರ್ಯನ್ ಖಾನ್ ಬಿಡುಗಡೆಗೆ ಮಧ್ಯವರ್ತಿ ಮೂಲಕ 25 ಕೋಟಿ ರೂ. ಬೇಡಿಕೆ ಇಡಲಾಗಿತ್ತು ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ಕೆಪಿ ಗೋಸಾವಿ ಆಪ್ತ ಎನ್ನಲಾದ ಪ್ರಭಾಕರ್ ಸೈಲ್ ಅವರು ಸಮೀರ್ ವಾಂಖೆಡೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ತಮಗೆ ಜೀವ ಬೆದರಿಕೆ ಇದೆ ಎಂದು ಅವರು ತಿಳಿಸಿದ್ದಾರೆ.
ಐಷಾರಾಮಿ ಹಡಗಿನ ಮೇಲೆ ದಾಳಿ ನಡೆದ ಬಳಿಕ ಕೆಲವು ಸಾಕ್ಷಿದಾರರಿಂದ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ಖಾಲಿ ಹಾಳೆ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ಅಲ್ಲದೇ ಆರ್ಯನ್ ಬಂಧನದ ಬಳಿಕ ಹಣ ವಿನಿಮಯಕ್ಕೆ ಸಂಬಂಧಿಸಿದ ಬೆಳವಣಿಗೆಗಳಿಗೆ ನಾನೇ ಸಾಕ್ಷಿ ಎಂದು ಸೈಲ್ ಹೇಳಿದ್ದಾರೆ.
ಓದಿ: ನಿಧಾನಗತಿಯಲ್ಲಿ ಜೈಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಆರ್ಯನ್ ಖಾನ್