ಮುಂಬೈ: ದಕ್ಷಿಣ ಭಾರತದ ಪ್ರತಿಭಾನ್ವಿತ ನಟಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಪ್ರಿಯಾಮಣಿ ಬಾಲಿವುಡ್ಗೂ ತಮ್ಮ ಸಿನಿಮಾ ವೃತ್ತಿಜೀವನವನ್ನು ವಿಸ್ತರಿಸಲು ಆಸಕ್ತಿ ತೋರಿಸಿದ್ದಾರೆ.
ಪಂಚಾಭಾಷಾ ತಾರೆ ಎಂದೇ ಕರೆಯಲ್ಪಡುವ ಪ್ರಿಯಾಮಣಿ ದಿ ಫ್ಯಾಮಿಲಿ ಮ್ಯಾನ್ನಂತಹ ವೆಬ್ ಶೋಗಳಲ್ಲಿ ಕೂಡ ಕಾಣಿಸಿಕೊಂಡಿದ್ರು. 2013 ರಲ್ಲಿ ಬಿಡುಗಡೆಯಾದ ಶಾರುಖ್ ಖಾನ್ ದೀಪಿಕಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸ್ಪ್ರೆಸ್ನ ಸೂಪರ್ ಹಿಟ್ ಹಾಡೊಂದಕ್ಕೆ ಪ್ರಿಯಾಮಣಿ ಹೆಜ್ಜೆ ಹಾಕಿದ್ರು. ಹೀಗಾಗಿ ಉತ್ತಮ ಅವಕಾಶಗಳು ದೊರೆತರೆ ಹಿಂದಿ ಚಿತ್ರಗಳಲ್ಲಿ ಕೂಡ ತಮ್ಮ ಛಾಪು ಮೂಡಿಸಲು ಪ್ರಿಯಾಮಣಿ ಉತ್ಸುಕರಾಗಿದ್ದಾರೆ.
ಹಿಂದಿ ಚಿತ್ರ ನಿರ್ಮಾಪಕರು ನನಗೆ ಯಾವುದೇ ಪಾತ್ರ ಸೂಟ್ ಆಗುತ್ತದೆ ಎಂದು ಅಂದುಕೊಂಡ್ರೆ ಅದು ನನಗೆ ಉತ್ತಮ ಅವಕಾಶವಾಗಲಿದೆ ಎಂದಿದ್ದಾರೆ. ಬಾಲಿವುಡ್ನಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ನಿಜ ಆದರೆ ತುದಿಗಾಲಲ್ಲಿ ನಿಂತಿಲ್ಲ. ಯಾಕೆಂದರೆ ನಾನು ಇದುವರೆಗೂ ಮಾಡಿರುವ ಸಿನಿಮಾ ಪಾತ್ರಗಳು, ವೆಬ್ ಸಿರೀಸ್ ನನಗೆ ಸಾಕಷ್ಟು ತೃಪ್ತಿ ನೀಡಿವೆ ಎಂದು ಪ್ರಿಯಾಮಣಿ ಹೇಳಿದ್ದಾರೆ.
ಹೆಚ್ಚಿನದಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಕೆಲಸ ಮಾಡಿದ ಈ ನಟಿ ರಾವನ್ ಮತ್ತು ರಕ್ತ ಚರಿತ್ರಾ -2ರಂತಹ ಬಹುಭಾಷಾ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇನ್ನು ಚೆನ್ನೈ ಎಕ್ಸ್ಪ್ರೆಸ್ನಲ್ಲಿ 1 2 3 4 ಗೆಟ್ ಆನ್ ಡ್ಯಾನ್ಸ್ ಫ್ಲೋರ್ ಸಾಂಗ್ನಲ್ಲಿ ವಿಶೇಷವಾಗಿ ಕಾಣಿಸಿಕೊಂಡಿದ್ದರು. ಮುಂದೆ ಪ್ರಿಯಾಮಣಿ ಅಜಯ್ ದೇವಗನ್ ಜೊತೆ ಮೈದಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.