ಪದ್ಮಭೂಷಣ ಪ್ರಶಸ್ತಿ ವಿಜೇತೆ, ಬಾಲಿವುಡ್ ನಟಿ ಶಬಾನಾ ಅಜ್ಮಿ ಹಾಗೂ ಬಾಲಿವುಡ್ ಸಾಹಿತಿ ಜಾವೇದ್ ಅಖ್ತರ್, ಇತ್ತೀಚೆಗಷ್ಟೇ 37ನೇ ವರ್ಷದ ವೈವಾಹಿಕ ಜೀವನವನ್ನು ಪೂರ್ಣಗೊಳಿಸಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ, ಇಂದಿಗೂ ಕೂಡಾ ಪರಸ್ಪರ ಪ್ರೀತಿಸುತ್ತಾ, ಗೌರವಿಸುತ್ತಾ ಬದುಕುತ್ತಿದ್ದಾರೆ.
ಇನ್ನು ಇತ್ತೀಚಿನ ಸಂದರ್ಶನದಲ್ಲಿ ಶಬನಾ ಅಜ್ಮಿ ತಮ್ಮ ಪತಿ ಜಾವೇದ್ ಅಖ್ತರ್ ಅವರ ಬಗ್ಗೆ ಒಂದು ತಮಾಷೆ ಸಂಗತಿಯನ್ನು ಹೇಳಿಕೊಂಡಿದ್ದಾರೆ. 'ನನ್ನ ಪತಿ ಜಾವೇದ್ 37 ವರ್ಷಗಳ ನಂತರ ನನ್ನ ಗಲ್ಲದ ಮೇಲಿನ ಮಚ್ಚೆಯನ್ನು ನೋಡಿದ್ದಾರೆ. ಅದಕ್ಕೂ ಮುನ್ನ ಅವರಿಗೆ ನನ್ನ ಗಲ್ಲದ ಮೇಲೆ ಮಚ್ಚೆ ಇರುವುದೇ ಗೊತ್ತಿರಲಿಲ್ಲವಂತೆ. ಮೊದಲೇ ಏಕೆ ಆ ಮಚ್ಚೆಯನ್ನು ನೋಡಲಿಲ್ಲ ಎಂದು ಕೇಳಿದ್ದಕ್ಕೆ, ಇಷ್ಟು ದಿನ ನಿನ್ನ ಸೌಂದರ್ಯ ಹಾಗೂ ಪ್ರೀತಿಯಲ್ಲಿ ನಾನು ಕುರುಡನಾಗಿದ್ದೆ, ನಿನ್ನ ಕಣ್ಣುಗಳನ್ನು ನಾನು ಬಹಳ ಇಷ್ಟಪಟ್ಟು ನೋಡುತ್ತಿದ್ದೆ ಎಂದು ರೊಮ್ಯಾಂಟಿಕ್ ಆಗಿ ಉತ್ತರ ನೀಡಿದ್ದರಂತೆ ಜಾವೇದ್. ಅಲ್ಲದೆ ಇದ್ದಕ್ಕಿದ್ದಂತೆ ಆ ಮಚ್ಚೆ ಹೇಗೆ ಬಂತು ಎಂದು ನನ್ನನ್ನು ಪ್ರಶ್ನಿಸಿದರು. ಆ ಮಚ್ಚೆ ನಾನು ಹುಟ್ಟಿದಾಗಿನಿಂದ ಇದೆ ಎಂದು ನಾನು ಹೇಳಿದೆ' ಎಂದು ಶಬಾನಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಲಾಕ್ಡೌನ್ನಿಂದ ಬಹಳ ದಿನಗಳಿಂದ ನನ್ನ ಜೊತೆಗೆ ಇರುವ ಜಾವೇದ್ ನನ್ನಲ್ಲಿ ಸಣ್ಣ ಪುಟ್ಟ ವಿಚಾರಗಳನ್ನು ಗುರುತಿಸಲು ಆರಂಭಿಸಿದ್ದಾರಂತೆ. ಆದ ಕಾರಣ ಇತ್ತೀಚೆಗೆ ನನ್ನ ಗಲ್ಲದ ಮೇಲಿರುವ ಮಚ್ಚೆಯನ್ನು ಅವರು ಗಮಿನಿಸಿದ್ದಾರೆ ಎಂದು ಶಬಾನಾ ಹೇಳಿದ್ದಾರೆ. ಜಾವೇದ್ ಹಾಗೂ ಶಬಾನಾ ಲಾಕ್ಡೌನ್ ಘೋಷಣೆಯಾದಾಗಿನಿಂದ ಮುಂಬೈನ ತಮ್ಮ ನಿವಾಸದಲ್ಲಿ ನೆಲೆಸಿದ್ದಾರೆ. ಆಶ್ಚರ್ಯ ಎಂದರೆ ಮದುವೆಯಾದಾಗಿನಿಂದ ಇಷ್ಟು ದಿನಗಳ ಕಾಲ ಅವರಿಬ್ಬರೂ ಜೊತೆಗೆ ಇರುವುದು ಇದೇ ಮೊದಲಂತೆ.