ಬಾಲಿವುಡ್ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಪ್ರಖ್ಯಾತಿ ಹೊಂದಿದ್ದ, ನಟ ಸಿದ್ಧಾರ್ಥ್ ಶುಕ್ಲಾ ನಿಧನದಿಂದ ಇಡೀ ಬಾಲಿವುಡ್ ಚಿತ್ರರಂಗ ಆಘಾತಕ್ಕೊಳಗಾಗಿದೆ. 40 ವರ್ಷ ವಯಸ್ಸಿನ ಸಿದ್ಧಾರ್ಥ್ ಶುಕ್ಲಾ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದರು.
ಹಿಂದಿ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-13ರ ವಿಜೇತನಾಗಿರುವ ಶುಕ್ಲಾ ನಿಧನ ಅವರ ತಾಯಿ, ಸಹೋದರಿಯರು ಹಾಗೂ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ. ಈ ನಟನ ಅಕಾಲಿಕ ಸಾವಿಗೆ ಸ್ಯಾಂಡಲ್ವುಡ್ ನಟಿಯರಾದ ಸಂಜನಾ ಗಲ್ರಾನಿ ಹಾಗು ಪ್ರಣೀತಾ ಸುಭಾಷ್ ಸಂತಾಪ ಸೂಚಿಸಿದ್ದಾರೆ.
ಸಿದ್ಧಾರ್ಥ್ ಶುಕ್ಲಾ ಅವ್ರನ್ನು ಬಹಳ ಹತ್ತಿರದಿಂದ ನೋಡಿರುವ, ನಟಿ ಸಂಜನಾ ಗಲ್ರಾನಿ, ಯಾವಾಗಲೂ ಖುಷಿ ಖುಷಿಯಾಗಿ ಮಾತನಾಡಿಸುತ್ತಿದ್ರು. ಆದರೆ ಇವತ್ತು ಬಂದ ಸುದ್ದಿ ಶಾಕ್ ಕೊಟ್ಟಿದೆ. 6 ಫೀಟ್ ಹೈಟ್, ಕಟ್ಟುಮಸ್ತಿನ ಮೈಕಟ್ಟನ ದೇಹ ಹೊಂದಿದ್ದ, ಸಿದ್ಧಾರ್ಥ್ ಶುಕ್ಲಾ ಅವರಿಗೆ ಹೃದಯಾಘಾತ ಆಯ್ತು ಅಂದರೆ ನಂಬಲಾಗ್ತಿಲ್ಲ ಅಂತಾ ಸಂಜನಾ ಹೇಳಿದ್ದಾರೆ.
ಇದನ್ನೂ ಓದಿ: ನಟ, ಬಿಗ್ ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ..!
ಸಿದ್ಧಾರ್ಥ್ ಅವರು ಭೇಟಿ ಆದಾಗೆಲ್ಲ ಚೆನ್ನಾಗಿ ಮಾತಾಡ್ತಿದ್ರು. ಹಿಂದಿ ಕಿರುತೆರೆಯಲ್ಲಿ ಬಹಳ ಪ್ರಖ್ಯಾತಿ ಹೊಂದಿದ್ದರು, ಆದರೆ ಸಿದ್ಧಾರ್ಥ್ ಶುಕ್ಲಾ ಸಾವಿನಿಂದ ತುಂಬಾ ನೋವಾಗಿದೆ. ಜೀವನ ಬಹಳ ಚಿಕ್ಕದು, ಎಲ್ಲರೂ ಇರುವಷ್ಟು ದಿನ ಖುಷಿ ಖುಷಿಯಾಗಿ ಇರಿ ಅಂತಾ ಅವರು ಭಾವುಕರಾಗಿ ನುಡಿದರು.
ನಟಿ ಪ್ರಣೀತಾ ಸುಭಾಷ್ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಸಿದ್ಧಾರ್ಥ್ ಶುಕ್ಲಾ ಫೋಟೋವನ್ನ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದ್ದ ಶುಕ್ಲಾ, ಬಾಬುಲ್ ಕಾ ಆಂಗನ್ ಚೂಟೇ ನಾ ಧಾರವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ್ದರು. ಬಳಿಕ ಹಂಮ್ಟಿ ಶರ್ಮಾ ಕೀ ದುಲ್ಹನಿಯಾ ಸಿನಿಮಾದಲ್ಲಿ ಪೋಷಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು.