ಮುಂಬೈ(ಮಹಾರಾಷ್ಟ್ರ): ಮುಂಬೈ ಮಹಾನಗರ ಪಾಲಿಕೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಮುಂಬೈ ಕಚೇರಿಯನ್ನು ಅಲ್ಲಿನ ಪಾಲಿಕೆ ಸಿಬ್ಬಂದಿ ನೆಲಸಮ ಮಾಡುತ್ತಿದ್ದಾರೆ. ಪಾಲಿಹಿಲ್ ರಸ್ತೆಯಲ್ಲಿನ ಕಚೇರಿಯನ್ನು ಜೆಸಿಬಿ ಮೂಲಕ ತೆರವು ಮಾಡಲಾಗುತ್ತಿದೆ.
ಮುಂಬೈಯನ್ನು ಪಾಕ್ ಅಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ಬಳಿಕ ಕಂಗನಾ ವಿರುದ್ಧ ಶಿವಸೇನೆ ಹಾಗೂ ಮಹಾರಾಷ್ಟ್ರ ಮೈತ್ರಿ ಸರ್ಕಾರ ಆಕ್ರೋಶ ವ್ಯಕ್ತಪಡಿಸಿತ್ತು. ಇದೇ ವಿಚಾರ ಸಂಬಂಧ ಕಳೆದ ಕೆಲ ದಿನಗಳಲ್ಲಿ ಆರೋಪ ಪ್ರತ್ಯಾರೋಪಗಳು ಮುಂದುವರೆಯುತ್ತಲೇ ಇವೆ.
ಬಾಂದ್ರಾದಲ್ಲಿರುವ ಕಂಗನಾ ಅವರ ಬಂಗಲೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿದೆ. ಆದರೆ ಬಿಎಂಸಿ ಅನುಮತಿ ಪಡೆದಿಲ್ಲ ಎಂದು ಮುಂಬೈ ಮಹಾನಗರ ಪಾಲಿಕೆ ನೋಟಿಸ್ ಕೂಡ ಜಾರಿ ಮಾಡಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ನಟಿ ಕಂಗನಾ ಇಂದು ಮುಂಬೈಗೆ ಬರುತ್ತಿದ್ದು, ಅವರಿಗೆ ಕೇಂದ್ರ ಸರ್ಕಾರ ವೈ ಪ್ಲಸ್ ಭದ್ರತೆಯನ್ನು ನೀಡಿದೆ. 10 ಮಂದಿ ಶಸ್ತ್ರಸಜ್ಜಿತ ಕಮಾಂಡೋಗಳು ಕಂಗನಾ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.