ಮುಂಬೈ: ಕನ್ನಡತಿ, ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಆ್ಯಸಿಡ್ ದಾಳಿ ಸಂತ್ರಸ್ತೆಗೆ 10 ಲಕ್ಷ ರೂ ನೀಡಿ ಮಾನವೀಯತೆ ಮೆರೆದಿದ್ದಾರೆ. ಆ್ಯಸಿಡ್ ದಾಳಿಗೊಳಗಾಗಿ ಬದುಕಿ ಉಳಿದಿರುವ 25 ವರ್ಷದ ಬಾಲಾ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು, ಇದೀಗ ಶಸ್ತ್ರಚಿಕಿತ್ಸೆಗೋಸ್ಕರ ಈ ಹಣ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಮೂತ್ರಪಿಂಡ ವೈಫಲ್ಯದಿಂದ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಬಾಲಾ ಹೋರಾಟ ನಡೆಸಿದ್ದು, ಅವರ ಕಿಡ್ನಿ ಕಸಿ ಮಾಡಲು 16 ಲಕ್ಷ ರೂಪಾಯಿ ಅವಶ್ಯಕತೆ ಇದೆ. ಹೀಗಾಗಿ ಬಾಲಾ ಕೆಲಸ ಮಾಡುತ್ತಿದ್ದ ಶಿರೋಜ್ ಹ್ಯಾಂಗೌಟ್ ಕೆಫೆ ಮ್ಯಾನೇಜ್ಮೆಂಟ್ ಅಭಿಯಾನ ಆರಂಭ ಮಾಡಿದ್ದು, ಇಲ್ಲಿಯವರೆಗೆ 10.83 ಲಕ್ಷ ರೂ. ಆರ್ಥಿಕ ಸಹಾಯ ಹರಿದು ಬಂದಿದೆ. ಇದೀಗ ನಟಿ ದೀಪಿಕಾ ಪಡುಕೋಣೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಆ್ಯಸಿಡ್ ಸಂತ್ರಸ್ತೆ ಬಾಲಾ ನಟಿ ದೀಪಿಕಾ ಪಡುಕೋಣೆ ಜೊತೆ ಛಪಾಕ್(Chhapaak) ಚಿತ್ರದಲ್ಲಿ ನಟನೆ ಸಹ ಮಾಡಿದ್ದಾರೆ.ಬಿಜ್ನೋರ್ ನಿವಾಸಿಯಾಗಿರುವ ಬಾಲಾ ಕಾಮಿಡಿ ನೈಟ್ ವಿತ್ ಕಪಿಲ್ ಕಾರ್ಯಕ್ರಮಕ್ಕೂ ಹೋಗಿದ್ದಳು. ಬಾಲಾ ಅನಾರೋಗ್ಯದ ಸುದ್ದಿ ನಟಿ ದೀಪಿಕಾ ಪಡುಕೋಣೆಗೆ ಗೊತ್ತಾಗುತ್ತಿದ್ದಂತೆ ನೆರವಿಗೆ ದಾವಿಸಿದ್ದಾರೆ.
ಇದನ್ನೂ ಓದಿರಿ: ಆಫ್ರಿಕಾ ಮೇಲೆ ಲಂಕಾ ಸವಾರಿ... ಮೊದಲ ಏಕದಿನ ಪಂದ್ಯ ಗೆದ್ದ ಸಿಂಹಳೀಯರ ತಂಡ
2012ರಲ್ಲಿ ಹರ್ಕೇಶ್ ಸಿಂಗ್ ಬಾಲಾ ಮೇಲೆ ಕೌಟುಂಬಿಕ ದ್ವೇಷದ ಕಾರಣ ಆ್ಯಸಿಡ್ ದಾಳಿ ಮಾಡಿದ್ದರು. ಈ ವೇಳೆ ಬಾಲಾ ಅಜ್ಜ ಸಾವನ್ನಪ್ಪಿದರೆ, ಇವಳು ಬದುಕುಳಿದಿದ್ದಳು. ಬಾಲಾ ಗಂಟಲು, ಕೈಗಳು ಹಾಗೂ ಮುಖ ಸುಟ್ಟು ಹೋಗಿದ್ದು, ಈಗಾಗಲೇ 12 ಶಸ್ತ್ರಚಿಕಿತ್ಸೆ ಮಾಡಲಾಗಿದೆ.