ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಬಾಲಿವುಡ್ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮಾನಸಿಕ ಖಿನ್ನತೆಯೇ ಸುಶಾಂತ್ ಆತ್ಮಹತ್ಯೆಗೆ ಕಾರಣ ಎಂದು ಕೂಡಾ ತಿಳಿದುಬಂದಿದೆ.
ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೆಲವೊಂದು ಸಿನಿಮಾಗಳಿಂದ ರಿಜೆಕ್ಟ್ ಮಾಡಿದ್ದಾರೆ ಎಂಬ ಕಾರಣಕ್ಕೆ ಬಾಲಿವುಡ್ ಕೆಲವೊಂದು ನಟರು, ನಿರ್ದೇಶಕರ ಮೇಲೆ ಇತ್ತೀಚೆಗೆ ಕೇಸ್ ಕೂಡಾ ದಾಖಲಾಗಿದೆ. ಇದೀಗ ನಟ ಸಾಹಿಲ್ ಖಾನ್ ಕೂಡಾ ಬಾಲಿವುಡ್ನಲ್ಲಿ ನನಗೂ ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ. ಸಾಹಿಲ್ ಖಾನ್ 2001 ರಲ್ಲಿ ಬಿಡುಗಡೆಯಾದ ಎನ್. ಚಂದ್ರ ನಿರ್ದೇಶನದ 'ಸ್ಟೈಲ್' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡಿದ್ದರು.
- " class="align-text-top noRightClick twitterSection" data="
">
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಸಾಹಿಲ್ ಖಾನ್, 'ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ಆದರೆ ನಾನು ಬಾಲಿವುಡ್ಗೆ ಬಂದ ಕೆಲವೇ ದಿನಗಳಲ್ಲಿ ಭಾರತದ ಖ್ಯಾತ ಸಿನಿಮಾ ಮ್ಯಾಗಜಿನ್ ಮುಖಪುಟಗಳಲ್ಲಿ ಬಾಲಿವುಡ್ನ ಇಬ್ಬರು ಸೂಪರ್ ಸ್ಟಾರ್ಗಳೊಂದಿಗೆ ನನ್ನ ಫೋಟೋ ಕೂಡಾ ಪ್ರಿಂಟ್ ಆಯ್ತು. ಆದರೆ ಇವರಲ್ಲಿ ಒಬ್ಬ ಸ್ಟಾರ್ ಮಾತ್ರ ನನ್ನ ಏಳಿಗೆಯನ್ನು ಸಹಿಸಿಕೊಳ್ಳಲಿಲ್ಲ. ಏಕೆಂದರೆ ಕಡಿಮೆ ಸಮಯದಲ್ಲಿ ನನಗೆ ಇಂತ ದೊಡ್ಡ ಅವಕಾಶ ದೊರೆಯಿತು.
ಇದಾದ ನಂತರ ಆ ಸೂಪರ್ಸ್ಟಾರ್ ನನ್ನನ್ನು ಟಾರ್ಗೆಟ್ ಮಾಡಲು ಆರಂಭಿಸಿದರು. ನಾನು ಸ್ಟಾರ್ ಆಗಿ ಮಿಂಚಲು ಎಲ್ಲಾ ಅವಕಾಶಗಳಿದ್ದರೂ ಕೂಡಾ ನನ್ನನ್ನು ಅವರ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಲು ಕರೆಯುತ್ತಿದ್ದರು. ಟಿವಿ ಕಾರ್ಯಕ್ರಮಗಳಿಗೆ ಬಾ ಎಂದು ಕರೆಯುತ್ತಿದ್ದರು. ಇದಾದ ಕೆಲವೇ ದಿನಗಳಲ್ಲಿ ನನಗೆ ಯಾವ ಸಿನಿಮಾಗಳಲ್ಲೂ ಅವಕಾಶ ದೊರೆಯಂತೆ ಮಾಡಿದರು. ಒಂದು ವೇಳೆ ಅವಕಾಶ ದೊರೆತರೂ ಆ ಸಿನಿಮಾಗಳಿಂದ ನನ್ನನ್ನು ಹೊರಕಳಿಸಲಾಯ್ತು. ಆ ಸೂಪರ್ ಸ್ಟಾರ್ ಯಾರಿರಬಹುದು ಗೆಸ್ ಮಾಡಿ' ಎಂದು ಸಾಹಿಲ್ ಬೇಸರದಿಂದ ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, 'ಸುಶಾಂತ್ ಸಿಂಗ್ ರಜಪೂತ್ ಈ ಸೂಪರ್ ಸ್ಟಾರ್ಗಳ ನಿಜವಾದ ಬಣ್ಣ ಏನೆಂಬುದನ್ನು ಹೊರಗೆ ಎಳೆದಿದ್ದಾರೆ. ಇವರು ಹೊಸ ಪ್ರತಿಭೆಗಳನ್ನು ಕಂಡರೆ ಹೆದರುತ್ತಾರೆ. ಯಾವ ಗಾಡ್ ಫಾದರ್ ಇಲ್ಲದೆ ಚಿತ್ರರಂಗದಲ್ಲಿ ಬೆಳೆಯುತ್ತಿದ್ದರೆ ಅಂತವರನ್ನು ಸಹಿಸಿಕೊಳ್ಳುವುದಿಲ್ಲ. ಅವರನ್ನು ಮೊದಲ ಸ್ಥಾನಕ್ಕೆ ಬೆಳೆಯುವುದಕ್ಕಂತೂ ಬಿಡುವುದೇ ಇಲ್ಲ. ಜಾನ್ ಅಬ್ರಹಾಂ ಹೊರತು ಕಳೆದ 20 ವರ್ಷಗಳಿಂದ ಚಿತ್ರರಂಗದ ಹಿನ್ನೆಲೆ ಇರದ ಯಾರೂ ಹೆಸರು ಮಾಡಿಲ್ಲ. ಈ ಬಣ್ಣದ ಲೋಕದಲ್ಲಿ ಸಿನಿಮಾ ಹಿನ್ನೆಲೆ ಇರುವವರಿಗೆ, ಸ್ಟಾರ್ ಮಕ್ಕಳಿಗೆ ಮಾತ್ರ ಅವಕಾಶ' ಎಂದು ಸಾಹಿಲ್ ಖಾನ್ ಮನಸ್ಸಿನಲ್ಲಿದ್ದ ದು:ಖವನ್ನು ಹೊರಹಾಕಿದ್ದಾರೆ.