ಬಾಲಿವುಡ್ ನಟ ಅಕ್ಷಯ್ ಕುಮಾರ್ ಫಣಿ ಚಂಡಮಾರುತದಿಂದ ನಲುಗಿರುವ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ಒಡಿಶಾ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಕೋಟಿ ರೂ. ದಾನ ಮಾಡಿ ಮತ್ತೊಮ್ಮೆ ತಾವು ಕಿಲಾಡಿ ಅಷ್ಟೇ ಅಲ್ಲ, ಕರುಣಾಮಯಿ ಕೂಡ ಹೌದು ಅನ್ನೋದನ್ನ ಸಾಬೀತುಪಡಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಅಟ್ಟಹಾಸ ಮೆರೆಯುತ್ತಿರುವ ಫಣಿ ಚಂಡಮಾರುತ ಜನರ ಜೀವನ ಅಸ್ತವ್ಯಸ್ಥಗೊಳಿಸಿದೆ. ಮುನ್ನೆಚ್ಚರಿಕೆ ಕ್ರಮದಿಂದ ಸಾವು-ನೋವಿನ ಸಂಖ್ಯೆ ಕಡಿಮೆಯಾಗಿದ್ದರೂ ಕೂಡ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಹಾನಿಗೊಳಗಾಗಿದೆ. ಚಂಡಮಾರುತ ಪೀಡಿತ ಪ್ರದೇಶಗಳ ಜನರಿಗೆ ಮರುವಸತಿ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಹಲವು ಸಂಘ-ಸಂಸ್ಥೆಗಳು ಕೂಡ ಆರ್ಥಿಕ ಸಹಾಯ ಮಾಡುತ್ತಿವೆ. ಇದೀಗ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಕೂಡ ಒಂದು ಕೋಟಿ ಹಣ ನೀಡಿ ರಿಯಲ್ ಹೀರೋ ಆಗಿದ್ದಾರೆ.
ಅಕ್ಷಯ್ ಕುಮಾರ್, ಹೀಗೆ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು ಇದೇ ಮೊದಲಲ್ಲ. ಹಿಂದೆ ಸಂಭವಿಸಿದ ಚೆನ್ನೈ ಹಾಗೂ ಕೇರಳ ಪ್ರವಾಹದ ವೇಳೆಯೂ ಅವರು ಕೈಬಿಚ್ಚಿ ಹಣ ನೀಡಿದ್ದರು. 2015 ರಲ್ಲಿ ಪ್ರವಾಹಕ್ಕೆ ತುತ್ತಾಗಿದ್ದ ಚೆನ್ನೈಗೆ 1 ಕೋಟಿ ರೂ. ನೀಡಿ ಹೃದಯ ವೈಶಾಲ್ಯತೆ ಮೆರೆದಿದ್ದರು.
ಲೋಕಸಭೆಯ ಚುನಾವಣೆಯಲ್ಲಿ ಮತದಾನ ಮಾಡದ ಅಕ್ಷಯ್ ಕುಮಾರ್ ಟ್ರೋಲ್ಗೆ ಸಿಲುಕಿದ್ದರು. ಅವರ ಸಿಟಿಜನ್ಶಿಪ್ ಬಗ್ಗೆ ಕೂಡ ಚರ್ಚೆಗಳು ನಡೆದಿದ್ದವು. ಮೊನ್ನೆಯಷ್ಟೆ ಇವುಗಳಿಗೆ ತಕ್ಕ ಉತ್ತರ ನೀಡಿದ್ದ ಅವರು, ನಾನು ಕೆನಡಾ ಸರ್ಕಾರದ ಪಾಸ್ಪೋರ್ಟ್ ಹೊಂದಿದ್ದು ಎಲ್ಲಿಯೂ ಮುಚ್ಚಿಟ್ಟಿಲ್ಲ. ಭಾರತ ದೇಶದ ಅಭಿವೃದ್ಧಿಗೆ ತೆರಿಗೆ ನೀಡುತ್ತೇನೆ. ಈ ದೇಶದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ನನ್ನ ದೇಶಪ್ರೇಮವನ್ನು ಬಾಯ್ಬಡುಕರ ಮುಂದೆ ಸಾಬೀತು ಪಡಿಸುವ ಅವಶ್ಯಕತೆ ನನಗಿಲ್ಲ ಎಂದಿದ್ದರು. ಇದೀಗ ದೇಶದಲ್ಲಿ ಉಂಟಾಗಿರುವ ಪ್ರಕೃತಿ ವಿಕೋಪಕ್ಕೆ ಸ್ಪಂದಿಸಿರುವ ಅವರು, ನಾನು ಮಾತಾಡಿ ಸುಮ್ಮನಿರುವವನಲ್ಲ. ಆಡಿದಂತೆ ನಡೆಯುವವನು ಎಂದು ಪರೋಕ್ಷವಾಗಿ ವಿರೋಧಿಗಳಿಗೆ ತಮ್ಮ ಕೆಲಸದ ಮೂಲಕ ಉತ್ತರ ಕೊಟ್ಟಿದ್ದಾರೆ.