ನವದೆಹಲಿ: ತಮ್ಮದೇ ಆದ ಅಧಿಕೃತ ಟ್ವಿಟರ್ ಖಾತೆ ಇಲ್ಲದೆಯೇ ಬೇರೆಯವರ ಟ್ವಿಟರ್ ಅಕೌಂಟ್ ಜಾಲಾಡುತ್ತಿದ್ದ ಅನೇಕ ಸಾಮಾಜಿಕ ಜಾಲತಾಣ ಪ್ರಿಯರಿಗೆ ಎಲಾನ್ ಮಸ್ಕ್ ಶಾಕ್ ನೀಡಿದ್ದಾರೆ. ಇನ್ಮುಂದೆ ಖಾತೆ ತೆರೆಯದೇ ಸುಖಾ ಸುಮ್ಮನೆ ಜನಪ್ರಿಯ ಸಾಮಾಜಿಕ ಜಾಲತಾಣವಾದ ಟ್ವಿಟರ್ನಲ್ಲಿ ಬೇರೆಯವರ ಟ್ವೀಟ್ಗಳನ್ನು ಪರಿಶೀಲನೆ ಮಾಡದಂತೆ ನಿರ್ಬಂಧ ಹೇರಿದ್ದಾರೆ. ಈ ಮೂಲಕ ಯಾವುದೇ ಟ್ವೀಟ್ ಅನ್ನು ಓದಬೇಕು ಎಂದರೂ ನಿಮ್ಮ ಟ್ವಿಟರ್ ಖಾತೆಯಿಂದ ಲಾಗಿನ್ ಆಗುವುದು ಕಡ್ಡಾಯವಾಗಲಿದೆ. ಟ್ವಿಟರ್ ಡೇಟಾವನ್ನು ಕದಿಯುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮಕ್ಕೆ ವಿಶ್ವದ ಶ್ರೀಮಂತ ಮುಂದಾಗಿದ್ದಾರೆ. ಜೊತೆಗೆ ಬಳಕೆದಾರರ ಖಾತೆಯ ರಕ್ಷಣೆಗೆ ಇದು ಅಗತ್ಯವಾಗಿದೆ ಎಂದಿದ್ದಾರೆ. ಇದರಿಂದ ಸಾರ್ವಜನಿಕವಾಗಿ ಹಾಗೆಯೇ ಟ್ವೀಟ್ಗಳನ್ನು ನೋಡಲು ಸಾಧ್ಯವಾಗದು.
ಡೇಟಾ ಕಳವು ತಪ್ಪಿಸಲು ಕ್ರಮ ಈ ಕುರಿತು ಮಾತನಾಡಿರುವ ಮಸ್ಕ್ ಇದು ತಾತ್ಕಾಲಿಕವಾದ ತುರ್ತು ಕ್ರಮವಾಗಿದೆ. ಸಾರ್ವಜನಿಕವಾಗಿ ಟ್ವೀಟ್ಗಳನ್ನು ಓದಲು ಸಾಧ್ಯವಿದ್ದ ಹಿನ್ನೆಲೆ ಡೇಟಾಗಳು ಕಳವು ಆಗುತ್ತಿದ್ದು, ಇದು ನಮ್ಮ ಸಾಮಾನ್ಯ ಬಳಕೆದಾರರ ಸೇವೆಯನ್ನು ಕೀಳಾಗಿಸುತ್ತಿತ್ತು. ಇದೀಗ ಪ್ರತಿಯೊಂದು ಕಂಪನಿಯೂ ಎಐ ಬಳಕೆ ಮಾಡುತ್ತಿದೆ. ಸ್ಟಾರ್ಟ್ಅಪ್ಗಳಿಂದ ಜಗತ್ತಿನ ಕೆಲವು ಅತಿ ದೊಡ್ಡ ಕಾರ್ಪೊರೇಷನ್ಗಳವರೆಗೆ, ದತ್ತಾಂಶಗಳನ್ನು ಸ್ಕ್ರಾಪ್ ಮಾಡುತ್ತಿದೆ ಎಂದು ಮಸ್ಕ್ ವಾದಿಸಿದ್ದಾರೆ.
ಮಸ್ಕ್ ಈ ನಿಯಮವನ್ನು ಜಾರಿಗೆ ತರಲು ಪ್ರಮುಖ ಕಾರಣ ಎಐ ಸಾಧನಗಳು ಟ್ವಿಟರ್ ಸರ್ಚಿಂಗ್ ಅನ್ನು ತಡೆಯುವುದಾಗಿದೆ. ಎಐ ಸ್ಟಾರ್ಟ್‌ಅಪ್ ಸೇರಿದಂತೆ ಪ್ರಮುಖ ಸಂಸ್ಥೆಗಳ ವಿರುದ್ಧ ಅಸಮಾಧಾನ ಹೊರ ಹಾಕಿರುವ ಮಸ್ಕ್, ಕೆಲವು ಸಂಸ್ಥೆಗಳು ದೊಡ್ಡ ಭಾಷೆಯ ಮಾದರಿಗಳಿಗೆ ತರಬೇತಿ ನೀಡಲು ಟ್ವಿಟರ್ ದತ್ತಾಂಶವನ್ನು ಬಳಕೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಈ ಕ್ರಮ ವಹಿಸಲಾಗಿದೆ ಎಂದು ತಮ್ಮ ಹೊಸ ನಿಯಮವನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹಿಂದೆ ಯಾವುದಾದರೂ ಸಾರ್ವಜನಿಕ ಟ್ವೀಟ್ಗಳನ್ನು ಖಾತೆ ಹೊಂದಿಲ್ಲದೆ, ಬಳಕೆದಾರರು ಪರಿಶೀಲಿಸಬಹುದಿತ್ತು. ಆದರೆ, ಇದೀಗ ಅದು ಸಾಧ್ಯವಾಗುವುದಿಲ್ಲ. ಟ್ವಿಟರ್ನ ಈ ಹೊಸ ಬದಲಾವಣೆ ಸುಲಭವಾಗಿ ಹಿಮ್ಮೆಟ್ಟಿಸಬಹುದಾಗಿದೆ. ಇನ್ನು ಈ ದತ್ತಾಂಶಗಳ ಲಾಕ್ ಮಾಡುವ ತಂತ್ರ ಇಂದಿನಿಂದ ಇನ್ನು ಎರಡು ಮೂರು ವರ್ಷ ನಡೆಯಲಿದೆ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
ಬಳಕೆದಾರರ ಮೇಲೆ ಪರಿಣಾಮ: ಟ್ವಿಟರ್ ತನ್ನ ದತ್ತಾಂಶವನ್ನು ಉಚಿತವಾಗಿ ನೀಡದೆ ಸುರಕ್ಷಿತಗೊಳಿಸಲು ಮುಂದಾಗಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದಾಗಿದೆ. ಇದರಿಂದ ಟ್ವಿಟರ್ ರೀಚ್ ನಿಸ್ಸಂಶಯವಾಗಿ ಕಡಿಮೆಯಗಲಿದೆ. ಟ್ವಿಟ್ಗಳ ಎಕ್ಸ್ಟ್ರಾನಲ್ ಲಿಂಕ್, ಎಂಬೆಡ್ಗಳು ಕೂಡ ಕಡಿಮೆಯಾಗಲಿದೆ. ಜೊತೆಗೆ ಇದು ಗೌಪ್ಯತೆಯ ಕಾಳಜಿಯನ್ನು ಕೂಡ ಇದು ಹೆಚ್ಚಿಸುತ್ತದೆ. ದೀರ್ಘ ಕಾಲಕ್ಕೆ ಉತ್ತಮ ಪರಿಹಾರ ಪತ್ತೆ ಮಾಡುವ ಆಸೆ ಇದೆ ಎಂದು ಕೂಡ ತಿಳಿಸಲಾಗಿದೆ.
ಇನ್ನು, ಈ ಹೊಸ ಬದಲಾವಣೆಯಿಂದಾಗಿ ಇನ್ಮುಂದೆ ಟ್ವೀಟ್ಗಳನ್ನು ಓದುವ ಸಲುವಾಗಿ ಅನೇಕ ಮಂದಿ ಟ್ವಿಟರ್ ಖಾತೆಯನ್ನು ತೆರೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಈ ಬದಲಾವಣೆಯು ಸರ್ಚ್ ಇಂಜಿನ್‌ಗಳಲ್ಲಿನ ಟ್ವೀಟ್‌ಗಳ ಶ್ರೇಯಾಂಕದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಇದನ್ನೂ ಓದಿ: ಇಂಟರ್ನೆಟ್ನಿಂದ ಡೇಟಾ ಕದ್ದ ಆರೋಪ: Open AI ವಿರುದ್ಧ ಯುಎಸ್ನಲ್ಲಿ ಮೊಕದ್ದಮೆ