ಸ್ಯಾನ್ ಫ್ರಾನ್ಸಿಸ್ಕೊ : ವಾಟ್ಸ್ಆ್ಯಪ್ ರಿಪ್ಲೈ ವಿತ್ ಮೆಸೇಜ್ (reply with a message) ಎಂಬ ಹೊಸ ವೈಶಿಷ್ಟ್ಯವೊಂದನ್ನು ಹೊರತಂದಿದೆ. ಕಾಲ್ ನೋಟಿಫಿಕೇಶನ್ ಒಳಗಡೆ ಬಳಸಬಹುದಾದ ರಿಪ್ಲೈ ವಿತ್ ಮೆಸೇಜ್ ವೈಶಿಷ್ಟ್ಯವನ್ನು ಸದ್ಯ ಆ್ಯಂಡ್ರಾಯ್ಡ್ ಬೀಟಾ ಟೆಸ್ಟರ್ಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಬರುವ ದಿನಗಳಲ್ಲಿ ಮತ್ತಷ್ಟು ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಲಭ್ಯವಾಗುವಂತೆ ಮಾಡಲಾಗುವುದು ಎಂದು ಕಂಪನಿ ಹೇಳಿದೆ. ರಿಪ್ಲೈ ವಿತ್ ಮೆಸೇಜ್ ಸೌಲಭ್ಯದ ಮೂಲಕ ಈಗ ಒಳಬರುತ್ತಿರುವ ವಾಟ್ಸ್ಆ್ಯಪ್ ಕಾಲಿಂಗ್ ವೇಳೆ ಕರೆ ತಿರಸ್ಕರಿಸಬಹುದು ಹಾಗೂ ಅದೇ ಸಮಯದಲ್ಲಿ ಕಾಲ್ ಮಾಡಿದವರಿಗೆ ಮೆಸೇಜ್ ಕಳುಹಿಸಬಹುದು ಎಂದು ವರದಿಗಳು ತಿಳಿಸಿವೆ.
ವಾಟ್ಸ್ಆ್ಯಪ್ನಲ್ಲಿ ಕರೆ ಬರುತ್ತಿರುವಾಗ ಇನ್ನುಮುಂದೆ ಗ್ರಾಹಕರಿಗೆ ಇನ್ಕಮಿಂಗ್ ಕಾಲ್ ನೋಟಿಫಿಕೇಶನ್ ಜೊತೆಗೆ reply ಎಂಬ ಬಟನ್ ಕಾಣಿಸಲಿದೆ. ಈಗಿರುವ decline ಮತ್ತು answer ಬಟನ್ಗಳ ಜೊತೆಯಲ್ಲೇ ಇದು ಕಾಣಿಸಿಕೊಳ್ಳಲಿದೆ. ಒಂದು ವೇಳೆ ಬಳಕೆದಾರರು ರಿಪ್ಲೈ ಬಟನ್ ಟ್ಯಾಪ್ ಮಾಡಿದರೆ ಒಳಬರುತ್ತಿರುವ ಕರೆಯು ರಿಜೆಕ್ಟ್ ಆಗಲಿದೆ ಮತ್ತು ಒಂದು ಮೆಸೇಜ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇದರ ಮೂಲಕ ಬಳಕೆದಾರರು ಕರೆ ಮಾಡಿದವರಿಗೆ ಒಂದು ತ್ವರಿತ ಸಂದೇಶ ಕಳುಹಿಸಬಹುದು.
ಮೀಟಿಂಗ್ನಲ್ಲಿರುವಾಗ ಅಥವಾ ಇನ್ನಾವುದೋ ಕೆಲಸದಲ್ಲಿರುವಾಗ ಕರೆ ಸ್ವೀಕರಿಸಲು ಸಾಧ್ಯವಾಗದಿದ್ದಾಗ, ಆ ಸಂದರ್ಭಕ್ಕೆ ತಕ್ಕಂತೆ ಸೂಕ್ತವಾದ ಸಂದೇಶ ಕಳುಹಿಸಲು ಈ ಹೊಸ ಸೌಲಭ್ಯದಿಂದ ಸಾಧ್ಯವಾಗಲಿದೆ. ತನ್ನ ಹೊಸ ಮಲ್ಟಿ ಡಿವೈಸ್ ಲಾಗಿನ್ ಫೀಚರ್ ಮೂಲಕ ಒಂದೇ ವಾಟ್ಸ್ಆ್ಯಪ್ ಖಾತೆಯನ್ನು ಹಲವಾರು ಫೋನ್ಗಳಲ್ಲಿ ಬಳಸುವ ಅವಕಾಶವನ್ನು ವಾಟ್ಸ್ ಆ್ಯಪ್ ಇತ್ತೀಚೆಗೆ ನೀಡಿದೆ. ಬಳಕೆದಾರರು ಈಗ ತಮ್ಮ ಫೋನ್ ಅನ್ನು ನಾಲ್ಕು ಹೆಚ್ಚುವರಿ ಸಾಧನಗಳಲ್ಲಿ ಒಂದಾಗಿ ಲಿಂಕ್ ಮಾಡಬಹುದು. ಈ ಅಪ್‌ಡೇಟ್ ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಾಗಲು ಪ್ರಾರಂಭಿಸಿದೆ ಮತ್ತು ಮುಂಬರುವ ವಾರಗಳಲ್ಲಿ ಎಲ್ಲರಿಗೂ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.
ಸ್ಯಾಮ್ಸ್ಂಗ್ ಎಂ14 ಬೆಲೆ ಕಡಿತ: ಸ್ಯಾಮ್ಸಂಗ್ ಇತ್ತೀಚೆಗಷ್ಟೇ ತನ್ನ ಹೊಸ ಗ್ಯಾಲಕ್ಸಿ ಎಂ14 5ಜಿ ಸ್ಮಾರ್ಟ್ಪೋನ್ ಅನ್ನು ಲಾಂಚ್ ಮಾಡಿದೆ. ಅಮೆಜಾನ್ನಲ್ಲಿ ಈ ಪೋನ್ ಅನ್ನು ಆರಂಭಿಕ 14,990 ರೂಪಾಯಿ ಬೆಲೆಯಲ್ಲಿ ಲಾಂಚ್ ಮಾಡಲಾಗಿತ್ತು. ಆದರೆ ಈಗ ಅಮೆಜಾನ್ ಈ ಫೋನ್ ಮೇಲೆ ಹೆಚ್ಚುವರಿಯಾಗಿ 1500 ರೂಪಾಯಿಗಳ ಡಿಸ್ಕೌಂಟ್ ನೀಡುತ್ತಿರುವುದು ಆಕರ್ಷಕವಾಗಿದೆ. ಎಚ್ಡಿಎಫ್ಸಿ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇದನ್ನು ಇಗ 13,490 ರೂಪಾಯಿಗಳಲ್ಲಿ ಖರೀದಿಸಬಹುದು. 4ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಮಾಡೆಲ್ಗಳಿಗೆ ಸದ್ಯ ಈ ಸೌಲಭ್ಯ ಲಭ್ಯವಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 14 5ಜಿ ಫೋನ್ 6.6 ಇಂಚಿನ ಎಲ್ಸಿಡಿ ಪ್ಯಾನೆಲ್, V ಆಕಾರದ ನಾಚ್, FHD+ ರೆಸಲ್ಯೂಶನ್, 90Hz ರಿಫ್ರೆಶ್ ರೇಟ್, Exynos 1330 ಚಿಪ್ಸೆಟ್, 4 ಅಥವಾ 6 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೇಜ್ ವೈಶಿಷ್ಟ್ಯಗಳನ್ನು ಹೊಂದಿದೆ.
ಇದನ್ನೂ ಓದಿ : ಬ್ರೌಸರ್ನಿಂದ ಗ್ರಾಹಕರ ಡೇಟಾ ಕಳವು: ಕ್ರಿಪ್ಟೊಬಾಟ್ ಮಾಲ್ವೇರ್ ಬ್ಲಾಕ್ ಮಾಡಿದ ಗೂಗಲ್