ಓಮಿಕ್ರಾನ್ ಕೊರೊನಾ ವೈರಸ್ ಸೋಂಕಿನ ವಿರುದ್ಧ ಫೈಜರ್ ಅಥವಾ ಮಾಡರ್ನಾ ಬೂಸ್ಟರ್ ಲಸಿಕೆಗಳು ಉತ್ತಮ ರೋಗ ನಿರೋಧಕ ಶಕ್ತಿಯನ್ನು ನಿರ್ಮಾಣ ಮಾಡುವುದು ಸತ್ಯವಾದರೂ, ಹೀಗೆ ಲಸಿಕೆಯಿಂದ ಉತ್ಪನ್ನವಾದ ರೋಗನಿರೋಧಕ ಶಕ್ತಿ ಬಹುಕಾಲ ದೇಹದಲ್ಲಿ ಇರುವುದಿಲ್ಲ. ನೈಸರ್ಗಿಕವಾಗಿ ಸಿಗುವ ರೋಗ ನಿರೋಧಕ ಶಕ್ತಿಗಿಂತ ಬಲು ಬೇಗನೆ ಲಸಿಕೆಯಿಂದ ಪಡೆದ ರೋಗ ನಿರೋಧಕ ಶಕ್ತಿಯು ಮಾಯವಾಗುತ್ತದೆ.
ಕತಾರ್ ದೇಶದ ವೀಲ್ - ಕಾರ್ನಿಲ್ ಮೆಡಿಸಿನ್ ಎಂಬ ಸಂಶೋಧನಾ ಸಂಸ್ಥೆಯು ಕೈಗೊಂಡ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ. ವೀಲ್ - ಕಾರ್ನಿಲ್ ಮೆಡಿಸಿನ್ ಸಂಸ್ಥೆಯಲ್ಲಿ 1 ಲಕ್ಷ ಓಮಿಕ್ರಾನ್ ಸೋಂಕಿತ ಹಾಗೂ ಸೋಂಕಿತರಲ್ಲದ ವ್ಯಕ್ತಿಗಳ ಮೇಲೆ ಅಧ್ಯಯನ ನಡೆಸಲಾಯಿತು. ಫೈಜರ್ ಅಥವಾ ಮಾಡರ್ನಾ ಎಂಆರ್ಎನ್ಎ ಲಸಿಕೆಯ ಎರಡು ಡೋಸುಗಳನ್ನು ಪಡೆದ, ಈ ಹಿಂದೆ ಸೋಂಕು ತಗುಲಿರದ ವ್ಯಕ್ತಿಗಳಲ್ಲಿ ಓಮಿಕ್ರಾನ್ ವಿರುದ್ಧ ಯಾವುದೇ ಪ್ರತಿರೋಧಕ ಶಕ್ತಿ ಕಂಡು ಬರಲಿಲ್ಲ. ಈ ಕುರಿತಾದ ವರದಿಯು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾಗಿದೆ.
ಆದಾಗ್ಯೂ ಒಂದು ಬೂಸ್ಟರ್ ಪಡೆಯುವುದರಿಂದ ಓಮಿಕ್ರಾನ್ ಸೋಂಕಿನಿಂದ ಶೇ 60 ರಷ್ಟು ರಕ್ಷಣೆ ಸಿಗುತ್ತದೆ ಎನ್ನಲಾಗಿದೆ. ಹೊಸ ಕೊರೊನಾ ತಳಿಯ ಸೋಂಕು ಹರಡುವ ಮುನ್ನ, ಕೋವಿಡ್ ನಿಂದ ಸೋಂಕಿತರಾದ, ಹಾಗೂ ಯಾವುದೇ ಲಸಿಕೆ ಪಡೆಯದವರು - ಓಮಿಕ್ರಾನ್ ಅಲೆ ಬಂದಾಗ ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ ಅಂಥವರಿಗೆ ಶೇ 50 ರಷ್ಟು ರೋಗ ನಿರೋಧಕ ಶಕ್ತಿ ಇರುತ್ತದೆ. ಈ ನೈಸರ್ಗಿಕ ರೋಗ ನಿರೋಧಕ ಶಕ್ತಿಯು ಸೋಂಕು ತಗುಲಿದ ವರ್ಷದ ನಂತರವೂ ಅಷ್ಟೇ ಇರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಕೊರೊನಾ ಸೊಂಕಿತರಾಗಿದ್ದು, 3 ಡೋಸ್ ಎಂಆರ್ಎನ್ಎ ಲಸಿಕೆ ಪಡೆದಿದ್ದರೆ ಅಂಥವರಿಗೆ ಲಕ್ಷಣಸಹಿತ ಓಮಿಕ್ರಾನ್ ಸೋಂಕಿನಿಂದ ಶೇ 80 ರಷ್ಟು ರಕ್ಷಣೆ ಸಿಗುತ್ತದೆ ಎಂದು ಅಧ್ಯಯನಗಳಲ್ಲಿ ತಿಳಿದು ಬಂದಿದೆ.