ವಾಷಿಂಗ್ಟನ್: ಈ ದಶಕದ ಅಂತ್ಯದ ವೇಳೆಗೆ ನಾಸಾದ ಆರ್ಟೆಮಿಸ್ ಮಿಷನ್ ಮೂಲಕ ಅಮೆರಿಕವು ಅಂತರರಾಷ್ಟ್ರೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸಲಿದೆ ಎಂದು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. "ಅಮೆರಿಕದ ಗಗನಯಾತ್ರಿಗಳೊಂದಿಗೆ, ದಶಕದ ಅಂತ್ಯದ ವೇಳೆಗೆ ಅಂತರರಾಷ್ಟ್ರೀಯ ಗಗನಯಾತ್ರಿಯನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಲು ನಾವು ಉದ್ದೇಶಿಸಿದ್ದೇವೆ" ಎಂದು ಹ್ಯಾರಿಸ್ ಬುಧವಾರ ನಡೆದ ಸಭೆಯಲ್ಲಿ ಹೇಳಿದರು.
ಆರ್ಟೆಮಿಸ್ ಯೋಜನೆಯಲ್ಲಿ ಯುರೋಪ್, ಜಪಾನ್ ಮತ್ತು ಕೆನಡಾದಂತಹ ಮಿತ್ರರಾಷ್ಟ್ರಗಳು ಪ್ರಮುಖ ಪಾತ್ರ ವಹಿಸಿವೆ. ಆದಾಗ್ಯೂ ಆ ಅಂತರರಾಷ್ಟ್ರೀಯ ಗಗನಯಾತ್ರಿ ಯಾವ ದೇಶದವರಾಗಿರಬಹುದು ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಏತನ್ಮಧ್ಯೆ, 2024 ರಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲು ಭಾರತೀಯ ಗಗನಯಾತ್ರಿಗೆ ತರಬೇತಿ ನೀಡಲು ನಾಸಾ ಬದ್ಧವಾಗಿದೆ ಎಂದು ಹ್ಯಾರಿಸ್ ತಿಳಿಸಿದರು.
ನಾಸಾದ ಆರ್ಟೆಮಿಸ್ ಮಿಷನ್ ಮೂಲಕ ಮತ್ತೊಮ್ಮೆ ಮಾನವರನ್ನು ಚಂದ್ರನ ಮೇಲೆ ಕಳುಹಿಸುವ ಗುರಿಯನ್ನು ಅಮೆರಿಕ ಹೊಂದಿದೆ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಯುಎಸ್ ತನ್ನ ನಾಯಕತ್ವವನ್ನು ಕಾಪಾಡಿಕೊಳ್ಳಲಿದೆ. 2025 ರ ವೇಳೆಗೆ ಮಂಗಳ ಗ್ರಹದ ಅನ್ವೇಷಣೆಗಾಗಿ ಅಮೆರಿಕ ತಯಾರಿ ನಡೆಸುತ್ತಿದೆ. ಆರ್ಟೆಮಿಸ್ III ಚಂದ್ರನ ಮೇಲೆ ಮೊದಲ ಮಹಿಳೆ ಮತ್ತು ಭಿನ್ನ ಜನಾಂಗದ ಮೊದಲ ವ್ಯಕ್ತಿಯನ್ನು ಇಳಿಸಲಿದೆ. ಇದು ದೀರ್ಘಕಾಲೀನ, ಸುಸ್ಥಿರ ಉಪಸ್ಥಿತಿಗೆ ದಾರಿ ಮಾಡಿಕೊಡಲಿದೆ ಮತ್ತು ಮಂಗಳ ಗ್ರಹದ ಭವಿಷ್ಯದ ಕಾರ್ಯಾಚರಣೆಗಳಿಗೆ ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
"ಆರ್ಟೆಮಿಸ್ ಯೋಜನೆಯು ತಲೆಮಾರುಗಳಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಸಂಶೋಧನಾ ಯತ್ನವಾಗಿದೆ. ಅರ್ಧ ಶತಮಾನದಲ್ಲಿ ಮೊದಲ ಬಾರಿಗೆ ಯುನೈಟೆಡ್ ಸ್ಟೇಟ್ಸ್ ಮತ್ತೊಮ್ಮೆ ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೈಗೆ ಇಳಿಸಲಿದೆ. ನಾವು ಮೊದಲ ಚಂದ್ರನ ಮೇಲೆ ಬೇಸ್ ಕ್ಯಾಂಪ್ ಮತ್ತು ಚಂದ್ರನ ಕಕ್ಷೆಯಲ್ಲಿ ಮೊದಲ ನಿಲ್ದಾಣವನ್ನು ಸ್ಥಾಪಿಸಲಿದ್ದೇವೆ." ಎಂದು ಹ್ಯಾರಿಸ್ ಹೇಳಿದರು.
1972ರ ನಂತರ ಮೊದಲ ಬಾರಿಗೆ ಗಗನಯಾತ್ರಿಗಳನ್ನು ಚಂದ್ರನ ದಕ್ಷಿಣ ಧ್ರುವದ ಬಳಿ ಇಳಿಸುವ ಆರ್ಟೆಮಿಸ್-3 ಯೋಜನೆ 2025ರಲ್ಲಿ ನಡೆಯಲಿದೆ. ಆದಾಗ್ಯೂ ಯುಎಸ್ ಸರ್ಕಾರಿ ಉತ್ತರದಾಯಿತ್ವ ಕಚೇರಿಯ (ಜಿಎಒ) ಇತ್ತೀಚಿನ ವರದಿಯು ಯೋಜನೆಯ ಮಾನವ ಲ್ಯಾಂಡಿಂಗ್ ವ್ಯವಸ್ಥೆ ಮತ್ತು ಸ್ಪೇಸ್ ಸೂಟ್ ವಿನ್ಯಾಸದಲ್ಲಿ ಹಲವಾರು ಸಮಸ್ಯೆಗಳನ್ನು ಕಂಡು ಹಿಡಿದಿರುವುದರಿಂದ ಈ ಯೋಜನೆ 2027 ಕ್ಕಿಂತ ಮೊದಲು ಕಾರ್ಯಗತಗೊಳ್ಳದು ಎನ್ನಲಾಗಿದೆ.
ಇದನ್ನೂ ಓದಿ: 8GB ರ್ಯಾಮ್ನ ಹೊಸ ಲಾವಾ 5G ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ ರೂ.11,999 ರಿಂದ ಆರಂಭ