ಸ್ಯಾನ್ ಫ್ರಾನ್ಸಿಸ್ಕೋ : ಮಾನವ ಪ್ರಥಮ ಬಾರಿಗೆ ಚಂದ್ರನ ಮೇಲೆ ಇಳಿದು ಅರ್ಧ ಶತಮಾನ ಕಳೆದ ನಂತರವೂ ನಾವು ಆ ದಿಸೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಾಗದಿರುವುದು ಮಾನವಕುಲಕ್ಕೆ ನಿರಾಶಾದಾಯಕ ಎಂದಿರುವ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್, ಈಗಲಾದರೂ ನಾವು ಬಾಹ್ಯಾಕಾಶದಲ್ಲಿ ವಾಸದ ನೆಲೆಗಳನ್ನು ಹೊಂದುವ ಗುರಿ ಇಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ. 1969 ರಲ್ಲಿ ಅಪೊಲೊ 11 ಮಿಷನ್ ಮೊದಲ ಬಾರಿಗೆ ಚಂದ್ರನ ಮೇಲೆ ಮಾನವರನ್ನು ಇಳಿಸಿತ್ತು.
ಕಮಾಂಡರ್ ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಲೂನಾರ್ ಮಾಡ್ಯೂಲ್ ಪೈಲಟ್ ಬಜ್ ಆಲ್ಡ್ರಿನ್ ಜುಲೈ 20, 1969 ರಂದು ಅಪೊಲೊ ಲೂನಾರ್ ಮಾಡ್ಯೂಲ್ ಈಗಲ್ ನೌಕೆಯನ್ನು ಚಂದ್ರನ ಮೇಲೆ ಇಳಿಸಿದ್ದರು. ಅದಾಗಿ ಆರು ಗಂಟೆ 39 ನಿಮಿಷಗಳ ನಂತರ ಜುಲೈ 21 ರಂದು ಚಂದ್ರನ ಮೇಲೆ ಕಾಲಿಟ್ಟ ಆರ್ಮ್ಸ್ಟ್ರಾಂಗ್ ಹಾಗೆ ಮಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
19 ನಿಮಿಷಗಳ ನಂತರ ಆಲ್ಡ್ರಿನ್ ಕೂಡ ಚಂದ್ರನ ಮೇಲೆ ಇಳಿದಿದ್ದರು. ಇಬ್ಬರೂ ಸೇರಿ ಟ್ರಂಕ್ವಿಲಿಟಿ ಬೇಸ್ ಎಂದು ಹೆಸರಿಸಿದ ಸ್ಥಳದಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಒಟ್ಟಿಗೆ ಅನ್ವೇಷಣೆ ಮಾಡಿದ್ದರು.
"ಮಾನವ ಮೊದಲ ಬಾರಿಗೆ ಆಕಾಶಕ್ಕೆ ಹಾರಿದ ಕೇವಲ 66 ವರ್ಷಗಳ ನಂತರ ಚಂದ್ರನ ಮೇಲಿಳಿದಿದ್ದ. ಆದರೆ ಅದಾಗಿ ಅರ್ಧ ಶತಮಾನ ಕಳೆದರೂ ಹೆಚ್ಚಿನ ಪ್ರಗತಿಯಾಗಿಲ್ಲ" ಎಂದು ಮಸ್ಕ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ಇದು ನಾಗರಿಕತೆಯಾಗಿ ನಮ್ಮ ಉನ್ನತ ಸಾಧನೆಯಾಗಲು ಸಾಧ್ಯವಿಲ್ಲ. ಮಾನವಕುಲ ಈಗ ಚಂದ್ರನ ಮೇಲೆ ನೆಲೆಯನ್ನು ಹೊಂದಬೇಕು. ಮಂಗಳ ಗ್ರಹದಲ್ಲಿ ನಗರಗಳನ್ನು ಸ್ಥಾಪಿಸಬೇಕು ಮತ್ತು ನಕ್ಷತ್ರಗಳ ನಡುವೆ ವಾಸಿಸಬೇಕು" ಎಂದು ಮಸ್ಕ್ ಹೇಳಿದ್ದಾರೆ. ಭೂಮಿಯ ಕಕ್ಷೆಯನ್ನು ಮೀರಿ ಮಾನವರನ್ನು ಕರೆದುಕೊಂಡು ಹೋಗಲು ಮಸ್ಕ್ ಬಹಳ ದೊಡ್ಡ ಯೋಜನೆಗಳನ್ನು ರೂಪಿಸುತ್ತಿದ್ದಾರೆ.
"ಚಂದ್ರನ ಮೇಲೆ ಶಾಶ್ವತವಾದ ಮಾನವ ನೆಲೆಯನ್ನು ನಾವು ಹೊಂದಿರಬೇಕು ಮತ್ತು ನಂತರ ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸಬೇಕು. ಬಹುಶಃ ಬಾಹ್ಯಾಕಾಶ ನಿಲ್ದಾಣದ ಆಚೆಗೆ ಏನೋ ಇರಬಹುದು. ಅದು ನಂತರ ನಮಗೆ ಗೊತ್ತಾಗಲಿದೆ" ಎಂದು ಅವರು ಈ ಹಿಂದೆ ಹೇಳಿದ್ದರು. ಸ್ಪೇಸ್ಎಕ್ಸ್ನ ಸ್ಟಾರ್ಶಿಪ್ ಮೆಗಾ ರಾಕೆಟ್ ಮುಂದಿನ ಮೂರರಿಂದ ನಾಲ್ಕು ವರ್ಷಗಳಲ್ಲಿ ಮಂಗಳ ಗ್ರಹದ ಮೇಲೆ ಮಾನವ ರಹಿತ ನೌಕೆಯನ್ನು ಲ್ಯಾಂಡ್ ಮಾಡಬಹುದು ಎಂದು ಟೆಕ್ ಬಿಲಿಯನೇರ್ ಮಸ್ಕ್ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ : GenAIನಿಂದ 2030ರ ವೇಳೆಗೆ ಭಾರತದ ಜಿಡಿಪಿಗೆ 1.5 ಟ್ರಿಲಿಯನ್ ಡಾಲರ್ ಆದಾಯ: ವರದಿ