ಬೆಂಗಳೂರು: ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಟ್ವಿಟರ್ ಮತ್ತು ಮೆಟಾ ಮಾಲೀಕರ ನಡುವೆ ನಡೆಯುತ್ತಿರುವ ಶೀತಲ ಸಮರ ಬೂದಿ ಮುಚ್ಚಿದ ಕೆಂಡದಂತಿದೆ. ಟ್ವಿಟರ್ಗೆ ಪರ್ಯಾಯವಾಗಿ ಥ್ರೆಡ್ಸ್ ಅನ್ನು ತಂದಿರುವ ಮಾರ್ಕ್ ಜುಗರ್ಬರ್ಗ್ ನಡೆ ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಕಣ್ಣು ಕೆಂಪಾಗಿಸಿದೆ. ಕಳೆದ ವಾರ ಹೊಸ ವೈಶಿಷ್ಟ್ಯಗಳಿಂದ ಬಿಡುಗಡೆಯಾಗಿರುವ ಥ್ರೆಡ್ಸ್ ಜಾಲತಾಣಿಗರನ್ನು ಆಕರ್ಷಿಸುವಲ್ಲಿ ಯಶಸ್ಸು ಕಾಣುತ್ತಿದೆ. ಅಷ್ಟೇ ಅಲ್ಲ, ಬಿಡುಗಡೆಯಾದ ವಾರದಲ್ಲೇ 100 ಮಿಲಿಯನ್ ಬಳಕೆದಾರರು ಇದಕ್ಕೆ ಸೈನ್ ಅಪ್ ಆಗಿದ್ದಾರೆ.
ಈ ನಡುವೆ ಯಾವುದು ಉತ್ತಮ? ಎಂಬ ಚರ್ಚೆ ಜೋರಾಗಿದೆ. ತಾಲಿಬಾನ್ ಮುಖ್ಯಸ್ಥ ಅನಸ್ ಹಕ್ಕಾನಿ ಅವರು ಟ್ವಿಟರ್ ಬೆಂಬಲಕ್ಕೆ ನಿಂತಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಟ್ವಿಟರ್ ಪರ ಬ್ಯಾಟಿಂಗ್ ಮಾಡಿರುವ ಹಕ್ಕಾನಿ, ಅದಕ್ಕೆ ಸರಿಸಾಟಿ ಯಾವುದೂ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವೀಟ್ ಮಾಡಿರುವ ಹಕ್ಕಾನಿ, "ಬೇರೆ ಸಾಮಾಜಿಕ ಜಾಲತಾಣಗಳಿಗೆ ಹೋಲಿಕೆ ಮಾಡಿದರೆ ಟ್ವಿಟರ್ನಲ್ಲಿ ಎರಡು ಪ್ರಮುಖ ಪ್ರಯೋಜನಗಳಿವೆ. ಮೊದಲನೆಯದು ವಾಕ್ ಸ್ವಾತಂತ್ರ್ಯವಾದರೆ ಎರಡನೆಯದು ಟ್ವಿಟರ್ನ ಸಾರ್ವಜನಿಕ ಸ್ವಭಾವ ಮತ್ತು ವಿಶ್ವಾಸಾರ್ಹತೆ" ಎಂದು ಹೇಳಿದ್ದಾರೆ.
ಮೆಟಾದಂತೆ ಟ್ವಿಟರ್ನಲ್ಲಿ ಯಾವುದೇ ಅಸಹಿಷ್ಣು ನೀತಿ ಇಲ್ಲ. ಬೇರೆ ಯಾವುದೇ ಸಾಮಾಜಿಕ ಜಾಲತಾಣಗಳು ಇದಕ್ಕೆ ಪರ್ಯಾಯವಾಗದು. ಯಾವುದೇ ಮೈಕ್ರೋಬ್ಲಾಗಿಂಗ್ ಜಾಲತಾಣಗಳು ಬಂದರೂ ತಾಲಿಬಾನ್ ಟ್ವಿಟರ್ ಬಳಕೆ ಮಾಡಿ ಬೆಂಬಲಿಸುತ್ತದೆ ಎಂದಿದ್ದಾರೆ.
ತಾಲಿಬಾನ್ಗೆ ಟ್ವಿಟರ್ ಪ್ರಿಯವಾಗಲು ಕಾರಣ ಇದು : ಅಫ್ಘಾನಿಸ್ತಾನವನ್ನು ಆಳುತ್ತಿರುವ ತಾಲಿಬಾನ್ ಟ್ವಿಟರ್ ಕುರಿತು ಈ ಪರಿಯಾಗಿ ಒಲವು ತೋರಿಸಲು ಕಾರಣವೂ ಇದೆ. ಕಳೆದ ವರ್ಷ ಎಲೋನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಅವರು ಹಲವು ಮಾರ್ಪಾಡುಗಳನ್ನು ತಂದರು. ಅದರಲ್ಲಿ ಒಂದು, ಪ್ರಮುಖ ವ್ಯಕ್ತಿಗಳು, ಸೆಲೆಬ್ರಿಟಿಗಳು, ಜಾಹೀರಾತು ಬ್ರಾಂಡ್ಗಳ ಓಲೈಕೆ ಬಿಟ್ಟು, ಸಾಮಾನ್ಯರಂತೆ ಅವರನ್ನು ಪರಿಗಣಿಸುವುದು. ಮಸ್ಕ್ ಅವರ ಈ ಕ್ರಮವನ್ನು ತಾಲಿಬಾನ್ ಮೆಚ್ಚಿಕೊಂಡಿದೆ.
ಜನವರಿಯಲ್ಲಿ ಪಾವತಿದಾರ ಬಳಕೆದಾರರಿಗೆ ಮಾತ್ರ ಬ್ಲೂಟಿಕ್ ಪಾಲಿಸಿ ತಂದ ಬೆನ್ನಲ್ಲೇ ಇಬ್ಬರು ತಾಲಿಬಾನ್ ಅಧಿಕಾರಿಗಳು ಕೂಡ ಮಾಸಿಕ 8 ಡಾಲರ್ ಪಾವತಿಸುವ ಮೂಲಕ ಬ್ಲೂ ಟಿಕ್ ವೆರಿಫಿಕೇಷನ್ ಪಡೆಯುವಲ್ಲಿ ಯಶಸ್ವಿಯಾದರು. ಸದ್ಯ ಸಾಮಾಜಿಕ ಜಾಲತಾಣವನ್ನು ಅತ್ಯಂತ ಆಕ್ರಮಣಶೀಲವಾಗಿ ಬಳಕೆ ಮಾಡುತ್ತಿರುವ ತಾಲಿಬಾನ್, ಈ ಮೂಲಕ ತನ್ನ ಸಂದೇಶವನ್ನು ಎಲ್ಲೆಡೆ ಇರುವ ತನ್ನ ಪ್ರೇಕ್ಷಕರಿಗೆ ತಲುಪಿಸಲು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿದೆ.
ತಾಲಿಬಾನ್ ವಿರುದ್ಧ ಫೇಸ್‌ಬುಕ್, ಟಿಕ್‌ಟಾಕ್ : ಫೇಸ್‌ಬುಕ್ ಮತ್ತು ಟಿಕ್‌ಟಾಕ್ ಎರಡೂ ಜಾಲತಾಣಗಳು ತಾಲಿಬಾನ್ ಅನ್ನು ಭಯೋತ್ಪಾದಕ ಸಂಘಟನೆಯಾಗಿ ನೋಡುತ್ತವೆ. ಇದರಿಂದ ತಾಲಿಬಾನ್ ಯಾವುದೇ ಪೋಸ್ಟ್ ಅನ್ನು ತನ್ನ ಮೈಕ್ರೋ ಬ್ಲಾಕ್ನಲ್ಲಿ ಪ್ರಕಟಿಸಲು ಅನುಮತಿಸುವುದಿಲ್ಲ. ಇಂದಿಗೂ ಕೂಡ ಅದು ತಾಲಿಬಾನ್ ಸಂಘಟನೆ ಮೇಲೆ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ತಾಲಿಬಾನ್ ತನ್ನ ಚಿಂತನೆಯನ್ನು ಮುಕ್ತವಾಗಿ ಇದರಲ್ಲಿ ಹಂಚಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಟ್ವಿಟರ್ ಬೆಂಬಲಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಟ್ವಿಟರ್ಗೆ ಜೂಕರ್ಬರ್ಗ್ ಸೆಡ್ಡು... ಕೇವಲ 3 ದಿನದಲ್ಲಿ 7 ಕೋಟಿ ಜನರಿಂದ ಥ್ರೆಡ್ಸ್ ಆ್ಯಪ್ ಸೈನ್ಅಪ್!