ಪೂರ್ಣ ಹಿಮದಿಂದಲೇ ಆವೃತವಾಗಿರುವ ಅಂಟಾರ್ಕ್ಟಿಕಾದಲ್ಲಿ 4 ತಿಂಗಳ ಬಳಿಕ ಸೂರ್ಯ ರಶ್ಮಿ ಬೆಳಗಿದೆ. ಇದರ ಚಿತ್ರವನ್ನು ಯುರೋಪ್ ಬಾಹ್ಯಾಕಾಶ ಸಂಸ್ಥೆ ಬಿಡುಗಡೆ ಮಾಡಿದೆ.
ಅಂಟಾರ್ಕ್ಟಿಕಾದಲ್ಲಿ ದೀರ್ಘ ಕತ್ತಲೆ ಈ ವರ್ಷದ ಮೇ ತಿಂಗಳಲ್ಲಿ ಪ್ರಾರಂಭವಾಗಿತ್ತು. ಇಲ್ಲಿ ಸೂರ್ಯ 4 ತಿಂಗಳ ಕಾಲ ಅಸ್ತಮಿಸುತ್ತಾನೆ. ಇದು ಬಾಹ್ಯಾಕಾಶ ಸಂಶೋಧನೆಗೆ ಹೇಳಿ ಮಾಡಿದ ಋತುವಾಗಿರುತ್ತದೆ. ಇದೀಗ ಸೂರ್ಯ ಹಿಮದ ಮೇಲೆ ಬೆಳಕು ಚೆಲ್ಲಿದ್ದು, ಹೊಸ ಸಂಶೋಧನಾ ತಂಡಗಳು ಅಧ್ಯಯನಕ್ಕೆ ಸಿದ್ಧತೆ ನಡೆಸಲಿವೆ.
ಯುರೋಪ್ ಬಾಹ್ಯಾಕಾಶ ಸಂಸ್ಥೆಯ ಹ್ಯಾನ್ಸ್ ಹ್ಯಾಗ್ಸನ್ ಅವರು ಅಂಟಾರ್ಕ್ಟಿಕಾದಲ್ಲಿ ಸೂರ್ಯ ಉದಯಿಸುತ್ತಿರುವ ಚಿತ್ರವನ್ನು ಸೆರೆ ಹಿಡಿದು ಬಿಡುಗಡೆ ಮಾಡಿದ್ದಾರೆ. ಜೊತೆಗೆ "ಇಲ್ಲಿನ ಸಮಯವು ವೇಗವಾಗಿ ಮತ್ತು ಬಹಳ ನಿಧಾನವಾಗಿ ಗತಿಸುವ ವಿಚಿತ್ರ ಗುಣವನ್ನು ಹೊಂದಿದೆ. 2 ದಿನಗಳಲ್ಲಿ 75 ಡಿಗ್ರಿಯಷ್ಟು ದಕ್ಷಿಣದಲ್ಲಿ ಸೂರ್ಯನ ಹೊರಳುವಿಕೆಯನ್ನು ನಾವಿಲ್ಲಿ ಗಮನಿಸಬಹುದು" ಎಂದು ಹೇಳಿದ್ದಾರೆ.
ಬಾಹ್ಯಾಕಾಶ ಸಂಶೋಧನಾ ತಂಡದ ಸದಸ್ಯರು ಇಷ್ಟು ದಿನ ಕತ್ತಲೆಯಲ್ಲಿ ತಣ್ಣನೆಯ ವಾತಾವರಣದಲ್ಲಿದ್ದವರು ದಿಢೀರ್ ಆಗಿ ತೀವ್ರತರವಾದ ತಾಪಮಾನವನ್ನು ಅನುಭವಿಸಿದರು. ಈ ತಂಡ ಬಯೋಮೆಡಿಕಲ್ ಸಂಶೋಧನೆಯನ್ನು ನಡೆಸುತ್ತಿದೆ. ಸೂರ್ಯನ ಉದಯದ ಬಳಿಕ ಇಲ್ಲಿ 80 ಡಿಗ್ರಿ ಸೆಲ್ಸಿಯಸ್ ತಾಪಮಾನ ಇಳಿಕೆ ಕಂಡಿದೆ.
ಅಂಟಾರ್ಕ್ಟಿಕಾದಲ್ಲಿ ಎರಡೇ ಋತು: ಭೂಮಿಯ ಮೇಲೆ ನಾವು ಮೂರು ಋತುಗಳನ್ನು ಅನುಭವಿಸಿದರೆ, ಅಂಟಾರ್ಕ್ಟಿಕಾದಲ್ಲಿ ಎರಡೇ ಋತುಗಳು (ಬೇಸಿಗೆ ಮತ್ತು ಚಳಿಗಾಲ) ಇರುತ್ತವೆ. ದಟ್ಟವಾದ ಮಂಜುಗಡ್ಡೆಯಿಂದ ಆವೃತವಾದ ಈ ಪ್ರದೇಶ ಆರು ತಿಂಗಳ ಚಳಿಗಾಲದಲ್ಲಿ ಪೂರ್ಣ ಕತ್ತಲೆ ಆವರಿಸಿದ್ದರೆ, ಇನ್ನಾರು ತಿಂಗಳ ಬೇಸಿಗೆಯು ಹಗಲಿನಿಂದ ಕೂಡಿರುತ್ತದೆ.
ಇದನ್ನೂ ಓದಿ: ಸ್ಮಾರ್ಟ್ ವಾಚ್ ಬಳಸಿ ಕೆಪಿಟಿಸಿಎಲ್ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ: ಸಿಸಿಟಿವಿಯಿಂದ ಕೃತ್ಯ ಬಯಲು