ವಾಷಿಂಗ್ಟನ್(ಅಮೆರಿಕ): ಒಂದು ವೇಳೆ ಯಾರಾದರೂ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿದ್ದರೆ, ಅವರು ಕ್ಯಾನ್ಸರ್ಗೆ ತೆಗೆದುಕೊಳ್ಳುತ್ತಿರುವ ಔಷಧಗಳಿಂದ ಅವರ ಚರ್ಮದ ಮೇಲೆ ಅಡ್ಡ ಪರಿಣಾಮ ಬೀರುವಂತಿದ್ದರೆ, ಆ ಔಷಧಿ ಕ್ಯಾನ್ಸರ್ ವಿರುದ್ಧ ಸಮರ್ಥವಾಗಿ ಹೋರಾಡುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಈ ಸಂಶೋಧನೆಯನ್ನು ಜೆಎಎಂಎ ಡರ್ಮೆಟಾಲಜಿ (JAMA Dermatology) ಸಂಶೋಧನಾ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.
TriNetX Diamond ನೆಟ್ವರ್ಕ್ನಲ್ಲಿರುವ ಸುಮಾರು 14,016 ಕ್ಯಾನ್ಸರ್ ರೋಗಿಗಳ ಮಾಹಿತಿಯನ್ನು ಅಧ್ಯಯನ ಮಾಡಿದ ನಂತರ ಈ ವಿಚಾರ ಬೆಳಕಿಗೆ ಬಂದಿದೆ. ತಜ್ಞರು 50-50 ಮಾದರಿಯಲ್ಲಿ ರೋಗಿಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅಂದರೆ ಸುಮಾರು 7,008 ಮಂದಿ ಕ್ಯಾನ್ಸರ್ ಔಷಧಿಯಿಂದ ಅಡ್ಡಪರಿಣಾಮಗಳಿಗೆ ಒಳಗಾಗಿದ್ದರೆ, 7,008 ಮಂದಿಯ ಮೇಲೆ ಅಡ್ಡಪರಿಣಾಮಗಳು ಆಗಿರಲಿಲ್ಲ.
ಸುಮಾರು 3 ವರ್ಷ ಎರಡು ತಿಂಗಳ ಕಾಲ ಈ ಕ್ಯಾನ್ಸರ್ ರೋಗಿಗಳ ಮೇಲೆ ನಿಗಾ ಇಡಲಾಗಿದ್ದು, ಅವರಲ್ಲಿ 3,233 ಮಂದಿ ಸಾವನ್ನಪ್ಪಿದ್ದರು. ಅಂದರೆ ಶೇಕಡಾ 26.1ರಷ್ಟು. ಕನಿಷ್ಠ ಪ್ರಮಾಣದಲ್ಲಿ ಚರ್ಮದ ಮೇಲೆ ಅಡ್ಡಪರಿಣಾಮ ಹೊಂದಿದರಲ್ಲಿ ಮರಣ ಪ್ರಮಾಣ ಶೇಕಡಾ 22ರಷ್ಟು ಇಳಿಕೆಯಾಗಿತ್ತು.
ಕುತೂಹಲಕಾರಿ ಸಂಗತಿಯೆಂದರೆ ಚರ್ಮಕ್ಕೆ ಸಂಬಂಧಿಸಿದಂತೆ ಎಲ್ಲರಲ್ಲೂ ಒಂದೇ ರೀತಿಯ ಪರಿಣಾಮ ಇರಲಿಲ್ಲ. ವಿಟಲಿಗೋ (ಬಿಳಿ ತೊನ್ನು), ತುರಿಕೆ, ಚರ್ಮದ ಮೇಲೆ ಊತ ಇದ್ದವರ ಚರ್ಮದ ಮೇಲೆ ಕ್ಯಾನ್ಸರ್ ಔಷಧದ ಪರಿಣಾಮ ಪ್ರಬಲವಾಗಿತ್ತು ಎಂದು ತಿಳಿದುಬಂದಿದೆ. ಇಂಥವರಲ್ಲಿ ಶೇಕಡಾ 30ರಿಂದ 50ರಷ್ಟು ಮಂದಿ ಸಾವಿನಿಂದ ಪಾರಾಗಿದ್ದಾರೆ.
ಚರ್ಮದ ಪ್ರತಿಕ್ರಿಯೆಗಳು ಮತ್ತು ಕ್ಯಾನ್ಸರ್ ರೋಗಿಯ ನಡುವೆ ಸಂಬಂಧ ಮತ್ತು ಕಾರ್ಯವಿಧಾನಗಳನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆ ಅಗತ್ಯವಾಗಿದೆ. ಈ ಮೂಲಕ ರೋಗಿಗೆ ಬೇಕಾಗುವ ಚಿಕಿತ್ಸೆಯನ್ನು ಆದಷ್ಟು ಬೇಗ ನೀಡಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಚರ್ಮದ ಕ್ಷಯಕ್ಕೆ ಹೊಸ ಚಿಕಿತ್ಸೆ ಕಂಡು ಹಿಡಿದ ಸಂಶೋಧಕರು.. ಏನದು ಟ್ರೀಟ್ಮೆಂಟ್