ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ) : ಎಲಾನ್ ಮಸ್ಕ್ ಕಂಪನಿಯಾದ ಸ್ಪೇಸ್ ಎಕ್ಸ್ ತನ್ನ ಮೊದಲ ಸಂಪೂರ್ಣ ನಾಗರಿಕ ಮಿಷನ್ (ಇಲ್ಲಿ ಯಾರೂ ವೃತ್ತಿಪರ ಗಗನ ಯಾತ್ರಿಗಳು ಇರುವುದಿಲ್ಲ) 'ಇನ್ಸ್ಪಿರೇಷನ್- 4' ಅನ್ನು ಸೆಪ್ಟೆಂಬರ್ 15 ರಂದು ಕಕ್ಷೆಗೆ ಕಳುಹಿಸಲು ಸಿದ್ಧವಾಗಿದೆ. ಈ ಕುರಿತು ಇನ್ಸ್ಪಿರೇಷನ್ - 4 ಮಿಷನ್ ತಂಡವು ಟ್ವೀಟ್ ಮಾಡಿದ್ದು, ಈಗಾಗಲೇ ಸಿದ್ಧತೆಗಳನ್ನು ಪರಿಶೀಲನೆ ಮಾಡಲಾಗಿದ್ದು, ಉಡಾವಣೆಗೆ ಇನ್ಸ್ಪಿರೇಷನ್ ಸಜ್ಜಾಗಿದೆ ಎಂದಿದೆ.
ನಾಲ್ಕು ಪ್ರವಾಸಿಗರನ್ನು ಹೊತ್ತೊಯ್ಯಲಿರುವ ಇನ್ಸ್ಪಿರೇಷನ್- 4 ಕೆನಡಿ ಬಾಹ್ಯಾಕಾಶ ಕೇಂದ್ರದ ಪ್ಯಾಡ್ 39A ಇಂದ ಉಡಾವಣೆಯಾಗಲು ಸಜ್ಜಾಗಿದೆ. ಬಾಹ್ಯಾಕಾಶ ಇತಿಹಾಸದಲ್ಲಿ ವೃತ್ತಿಪರ ಗಗನಯಾನಿಗಳಿಲ್ಲದೇ ಇದೇ ಮೊದಲ ಬಾರಿಗೆ ರಾಕೆಟ್ ಬಾಹ್ಯಾಕಾಶಕ್ಕೆ ತೆರಳಲಿದೆ. ಮೂರು ದಿನಗಳ ಪ್ರವಾಸ ಇದಾಗಲಿದೆ.
ಬುಧವಾರ ರಾತ್ರಿ ಈ ರಾಕೆಟ್ ನಭಕ್ಕೆ ಹಾರಲಿದ್ದು, ಉದ್ಯಮಿ ಜಾರೆಡ್ ಐಸಾಕ್‌ಮ್ಯಾನ್ ಅವರೊಂದಿಗೆ ಇಬ್ಬರು ಕ್ಯಾನ್ಸರ್ನಿಂದ ಗುಣಮುಖರಾದ ಓರ್ವ ಆರೋಗ್ಯ ಕಾರ್ಯಕರ್ತರು ಮತ್ತು ಇನ್ನಿಬ್ಬರು ವ್ಯಕ್ತಿಗಳಿರುತ್ತಾರೆ ಎಂಬ ವಿಚಾರ ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕಿಂತ ಸುಮಾರು 160 ಕಿಲೋಮೀಟರ್ ದೂರದಲ್ಲಿ ಗಗನಯಾತ್ರಿಗಳು ಸಂಚಾರ ನಡೆಸಲಿದ್ದಾರೆ.
ಇನ್ಸ್ಪಿರೇಷನ್- 4 ತಂಡದ ಪ್ರಕಾರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಯ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಇದು ಸ್ಪೇಸ್ ಎಕ್ಸ್ ಕಂಪನಿಯ ಖಾಸಗಿ ಪ್ರಯಾಣವಾಗಿದ್ದು, ಇದಕ್ಕೆ ಈಗಾಗಲೇ ನೂರು ಮಿಲಿಯನ್ ಡಾಲರ್ ಸ್ಪೇಸ್ ಎಕ್ಸ್ಗೆ ಒಪ್ಪಿಸಲಾಗಿದೆ.
ಇನ್ನು ಸ್ಪೇಸ್ ಎಕ್ಸ್ ಕಂಪನಿಯು AX-1 ಮಿಷನ್ ಅನ್ನು 2021ರ ಅಂತ್ಯಕ್ಕೆ ಹಮ್ಮಿಕೊಳ್ಳಲಾಗಿದೆ. ಇಲ್ಲಿ ನಾಲ್ಕು ಖಾಸಗಿ ಗಗನಯಾತ್ರಿಗಳು ಎಂಟು ದಿನಗಳ ಕಾಲ ಬಾಹ್ಯಾಕಾಶ ಸಂಚಾರ ನಡೆಸಲಿದ್ದು, ತಲಾ 55 ಮಿಲಿಯನ್ ಡಾಲರ್ ಪಾವತಿಬೇಕಾಗುತ್ತದೆ.
ಇದನ್ನೂ ಓದಿ: ಕಾಬೂಲ್ ಏರ್ಪೋರ್ಟ್ನಲ್ಲಿ ವಿಮಾನಸೇವೆ ಶೀಘ್ರ ಆರಂಭ: ವರದಿ