ನವದೆಹಲಿ: ಚೀನಾದ ಸ್ಮಾರ್ಟ್ಫೋನ್ ಮಾರುಕಟ್ಟೆ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಕುಸಿತ ಕಂಡಿದೆ. ಜನವರಿಯಿಂದ ಆಗಸ್ಟ್ವರೆಗೆ ಚೀನಾ ಕೇವಲ 679 ಮಿಲಿಯನ್ ಸ್ಮಾರ್ಟ್ಫೋನ್ಗಳನ್ನು ಉತ್ಪಾದಿಸಿದೆ. 2022 ರ ಇದೇ ಅವಧಿಗೆ ಹೋಲಿಸಿದರೆ ಇದು ಶೇಕಡಾ 7.5 ರಷ್ಟು ಕಡಿಮೆಯಾಗಿದೆ ಎಂದು ದೇಶದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಿಸಿದ ಅಂಕಿ ಅಂಶಗಳು ತಿಳಿಸಿವೆ.
ಕೌಂಟರ್ ಪಾಯಿಂಟ್ ರಿಸರ್ಚ್ ಪ್ರಕಾರ, ದೇಶದಲ್ಲಿ ಸ್ಮಾರ್ಟ್ಫೋನ್ ಮಾರಾಟ ನಿಧಾನಗೊಂಡಿದ್ದು, 2023 ರ ಮೊದಲ ಎಂಟು ತಿಂಗಳಲ್ಲಿ ಶೇಕಡಾ 4 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿದಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಜೂನ್ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚೀನಾದ ಸ್ಮಾರ್ಟ್ಫೋನ್ ಬಳಕೆಯು 2014 ರ ಎರಡನೇ ತ್ರೈಮಾಸಿಕದ ಮಾರಾಟದ ಅಂಕಿಅಂಶಕ್ಕೆ ಇಳಿದಿದೆ. ಆದಾಗ್ಯೂ 2023 ರ ಉಳಿದ ತಿಂಗಳುಗಳಲ್ಲಿ ಮಾರಾಟ ಸುಧಾರಿಸುವ ನಿರೀಕ್ಷೆ ಇದೆ.
ಮುಂಬರುವ ಚಳಿಗಾಲದ ಮಾರಾಟದ ಋತುವಿನಲ್ಲಿ ಹುವಾವೇ ಮತ್ತು ಆಪಲ್ ಹೊಸ 5 ಜಿ ಸ್ಮಾರ್ಟ್ಫೋನ್ಗಳ ಬಿಡುಗಡೆಯು ಉದ್ಯಮಕ್ಕೆ ಉತ್ತೇಜನ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ವಿಶೇಷವಾಗಿ ಹುವಾವೇಯ ಮೇಟ್ 60 ಪ್ರೊ ಸರಣಿಯ 5 ಜಿ ಹ್ಯಾಂಡ್ಸೆಟ್ಗಳು ಚೀನಾದ ಸ್ಮಾರ್ಟ್ಫೋನ್ ಮಾರುಕಟ್ಟೆಯ ವಿಶ್ವಾಸವನ್ನು ಹೆಚ್ಚಿಸಿವೆ ಎಂದು ವರದಿ ತಿಳಿಸಿದೆ.
ಈ ವರ್ಷಾಂತ್ಯದ ವೇಳೆಗೆ ಹುವಾವೆ 5 ರಿಂದ 6 ಮಿಲಿಯನ್ 5ಜಿ ಸ್ಮಾರ್ಟ್ಪೋನ್ಗಳನ್ನು ಮಾರಾಟ ಮಾಡಬಹುದು ಎಂದು ಕೌಂಟರ್ಪಾಯಿಂಟ್ ವರದಿ ತಿಳಿಸಿದೆ. ಹುವಾವೆ ಸ್ಥಳೀಯವಾಗಿ ತನ್ನ ಹಾರ್ಮನಿ ಓಎಸ್ಗೆ ಅತ್ಯಧಿಕ ಸಂಖ್ಯೆಯ ಬಳಕೆದಾರರನ್ನು ಹೊಂದಿರುವುದರಿಂದ ದೊಡ್ಡ ಮಟ್ಟದಲ್ಲಿ ತನ್ನ ಸ್ಮಾರ್ಟ್ಫೋನ್ಗಳನ್ನು ಮಾರಾಟ ಮಾಡಲು ಸಹಾಯಕವಾಗಬಹುದು ಎನ್ನಲಾಗಿದೆ.
ಕಂಪನಿಯ ಹೊಸ ಮಾದರಿಯ 5ಜಿ ಸ್ಮಾರ್ಟ್ಫೋನ್ಗಳು ಹೊಸ ಗ್ರಾಹಕರನ್ನು ಆಕರ್ಷಿಸಲಿವೆ ಹಾಗೂ ಬಿಟ್ಟು ಹೋದ ಗ್ರಾಹಕರನ್ನು ಮತ್ತೆ ಬ್ರಾಂಡ್ನತ್ತ ಕರೆತರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ವರ್ಷದ ಮೊದಲ ಎಂಟು ತಿಂಗಳಲ್ಲಿ ಹುವಾವೇ ಸ್ಮಾರ್ಟ್ಫೋನ್ ಮಾರಾಟವು ಶೇಕಡಾ 41 ರಷ್ಟು ಹೆಚ್ಚಾಗಿದೆ. ಹುವಾವೇ ಚೀನಾದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಕಂಪನಿಯಾಗಿದ್ದು, ದೂರಸಂಪರ್ಕ ಸಾಧನಗಳಲ್ಲಿ ಪರಿಣತಿ ಹೊಂದಿದೆ.
ಇದನ್ನೂ ಓದಿ : 'ಐರನ್ ಡೋಮ್' ರಕ್ಷಣಾ ಕವಚ ವಿಫಲವಾಯಿತಾ? ಇಸ್ರೇಲ್ ಹೇಳಿದ್ದೇನು?