ಜಲ ವಿದ್ಯುತ್, ಪವನ ವಿದ್ಯುತ್, ಸೌರ ವಿದ್ಯುತ್ ಹಾಗೂ ಶಾಖೋತ್ಪನ್ನ ಮೂಲಕ ವಿದ್ಯುತ್ ಉತ್ಪಾದಿಸುವುದು ಈಗ ಎಲ್ಲೆಡೆ ನಡೆದಿದೆ. ಇದೀಗ ನಮ್ಮ ದೇಹ ಹಾಗೂ ನಾವು ಧರಿಸುವ ಬಟ್ಟೆಯಿಂದಲೂ ವಿದ್ಯುತ್ ಉತ್ಪಾದನೆ ಯತ್ನಗಳು ನಡೆಯುತ್ತಿದೆ. ಪ್ರಸ್ತುತ ಇದು ಪ್ರಾಯೋಗಿಕ ಹಂತದಲ್ಲಿದ್ದರೂ, ಶೀಘ್ರದಲ್ಲೇ ಸಾಕಾರಗೊಳ್ಳುವ ಸಾಧ್ಯತೆಯಂತೂ ಇದೆ.
ಹೌದು, ವಿಜ್ಞಾನಿಗಳು ಇತ್ತೀಚೆಗೆ ವಿಶೇಷ ಬಟ್ಟೆಯನ್ನು ಅಭಿವೃದ್ಧಿಪಡಿಸಿದ್ದಾರೆ, ಅದು ದೇಹದ ಚಲನೆಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ. ಸಿಂಗಾಪುರದ ನ್ಯಾನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿ (ಎನ್‌ಟಿಯು) ಸಂಶೋಧಕರು ಇಂತಹ ಕಾರ್ಯದಲ್ಲಿ ತೊಡಗಿದ್ದಾರೆ.
ದೇಹದ ಚಲನವಲನಗಳಿಂದ ವಿದ್ಯುತ್ ಉತ್ಪಾದಿಸಬಲ್ಲ ಸ್ಮಾರ್ಟ್ ಉಡುಪುಗಳನ್ನು ತಯಾರಿಸುವ ಪ್ರಯೋಗಗಳು ಅನೇಕ ವರ್ಷಗಳಿಂದಲೂ ನಡೆಯುತ್ತಿವೆ. ಕೆಲವು ಸಂಶೋಧಕರು ನೇಯ್ದ ಬಟ್ಟೆಗಳನ್ನು ಸಹ ಅಭಿವೃದ್ಧಿಪಡಿಸಿದ್ದಾರೆ. ಅದು ದೈನಂದಿನ ಚಲನೆಗಳ ಮೂಲಕ ಸಣ್ಣ ವಸ್ತುಗಳಿಗೆ ವಿದ್ಯುತ್ ಒದಗಿಸುತ್ತಿವೆ. ಆದರೆ, ಬಟ್ಟೆಯನ್ನು ತೊಳೆದಂತೆ ಅದರ ಸಾಮರ್ಥ್ಯವು ಕಡಿಮೆಯಾಗುತ್ತದೆ. ಈ ಸವಾಲನ್ನು ಮೆಟ್ಟಿ ನಿಲ್ಲಲು ಸಿಂಗಾಪುರದ ವಿಜ್ಞಾನಿಗಳು ಮುಂದಾಗಿದ್ದಾರೆ.
![ನಮ್ಮ ದೇಹ, ನಾವು ಧರಿಸುವ ಬಟ್ಟೆಯಿಂದಲೇ ವಿದ್ಯುತ್ ಉತ್ಪಾದನೆ: ಇದು ಹೇಗೆ ಸಾಧ್ಯ ಗೊತ್ತಾ?](https://etvbharatimages.akamaized.net/etvbharat/prod-images/15496153_thumb77777777.jpg)
ಇದು ಹೇಗೆ ಸಾಧ್ಯ?: ಸ್ಕ್ರೀನ್-ಪ್ರಿಂಟಿಂಗ್ ವಿಧಾನವನ್ನು ಬಳಸಿಕೊಂಡು ಸಿಲ್ವರ್ ನ್ಯಾನೊವೈರ್‌ಗಳ ಜೊತೆಗೆ ಸ್ಟೈರೀನ್ ಎಥಿಲೀನ್ ಬ್ಯುಟಿಲೀನ್ ಸ್ಟೈರೀನ್ (SEBS) ಅನ್ನು ಬಳಸಿಕೊಂಡು ವಿದ್ಯುದ್ವಾರ ತಯಾರಿಸಲಾಗಿದೆ. ಜೊತೆಗೆ ಪಾಲಿವಿನೈಲಿಡಿನ್ ಫ್ಲೋರೈಡ್ ಕೋ ಹೆಕ್ಸಾಫ್ಲೋರೋಪ್ರೊಪಿಲೀನ್ (PVDF-HPFF)ನಿಂದ ಸೀಸ ಮುಕ್ತ ಪೆರೋವ್‌ಸ್ಕೈಟ್‌ಗಳೊಂದಿಗೆ ಬಟ್ಟೆ ಅಭಿವೃದ್ಧಿ ಪಡಿಸಲಾಗಿದೆ. ಈ ಬಟ್ಟೆಯು ದೇಹದ ಚಲನೆಗಳಿಂದ ಉಂಟಾಗುವ ಕಂಪನಗಳಿಂದ ವಿದ್ಯುತ್ ಉತ್ಪಾದಿಸುತ್ತದೆ.
ಈ ಉಡುಪನ್ನು ಒತ್ತಿದಾಗ (ಪೀಜೋಎಲೆಕ್ಟ್ರಿಸಿಟಿ) ಅಥವಾ ಬಟ್ಟೆಯನ್ನು ಚರ್ಮ ಅಥವಾ ರಬ್ಬರ್ ಕೈಗವಸುಗಳಂತಹ ಇತರ ವಸ್ತುಗಳೊಂದಿಗೆ ಉಜ್ಜಿದಾಗ (ಟ್ರೈಬೋಎಲೆಕ್ಟ್ರಿಕ್ ಪರಿಣಾಮ) ವಿದ್ಯುತ್ ಉತ್ಪಾದನೆ ಆಗುತ್ತದೆ. ಸದ್ಯ ಪ್ರತಿ ಚದರ ಮೀಟರ್ ಬಟ್ಟೆಗೆ ಸರಾಸರಿ 2.34 ವ್ಯಾಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ದೇಹಕ್ಕೇನು ತೊಂದರೆ?: ಪ್ರಸ್ತುತ ಪ್ರತಿ ಚದರ ಮೀಟರ್ ಬಟ್ಟೆಗೆ 2.34 ವ್ಯಾಟ್ ವಿದ್ಯುತ್ ಎಲ್ಇಡಿ ಬಲ್ಬ್‌ಗಳು ಮತ್ತು ವಾಣಿಜ್ಯ ಕೆಪಾಸಿಟರ್‌ಗಳಿಗೆ ಬಳಕೆಗೆ ಸಾಕಾಗುತ್ತದೆ. ಆದರೆ, ಈ ಬಟ್ಟೆಯು ದೇಹದ ಚಲನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದೂ ಸಂಶೋಧಕರು ಭರವಸೆಯ ಮಾತುಗಳನ್ನಾಡಿದ್ದಾರೆ.
ಭವಿಷ್ಯದಲ್ಲಿ ಸ್ಮಾರ್ಟ್ ಬಟ್ಟೆಗಳನ್ನು ತಯಾರಿಸಲು ಈ ಬಟ್ಟೆಯನ್ನು ಬಳಸಬಹುದು. ಬಟ್ಟೆಯಿಂದ ಉತ್ಪತ್ತಿಯಾಗುವ ವಿದ್ಯುತ್ ಸೆಲ್ ಫೋನ್‌ಗಳು ಮತ್ತು ಸ್ಮಾರ್ಟ್‌ವಾಚ್‌ಗಳಂತಹ ನಾವು ಧರಿಸಬಹುದಾದ ಸಾಧನಗಳನ್ನು ಚಾರ್ಜ್ ಮಾಡಲು ಸಹ ಬಳಸಬಹುದು. ಪರಿಣಾಮವಾಗಿ, ನಾವು ಸಾಂಪ್ರದಾಯಿಕ ವಿದ್ಯುತ್ ಮೂಲಗಳ ಮೇಲೆ ಅತಿಯಾದ ಅವಲಂಬನೆ ತಪ್ಪಿಸಬಹುದು. ಈ ಬಟ್ಟೆಯನ್ನು ಧರಿಸಬಹುದಾದ ಸಾಧನಗಳು ಮತ್ತು ದೈನಂದಿನ ಬಟ್ಟೆಗಳಲ್ಲೂ ಸೇರಿಸಿಕೊಳ್ಳಬಹುದಾಗಿದೆ ಎಂದೂ ವಿವರಿಸಿದ್ದಾರೆ.
ಮೇಲಾಗಿ ಇದು ಜಲನಿರೋಧಕ ಬಟ್ಟೆ ಆಗಿರುವುದರಿಂದ ತೊಳೆದರೂ ಇದರ ಕಾರ್ಯ ನಿರ್ವಹಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಇದು ಫೈಬರ್ ವಸ್ತುಗಳಿಂದ ಕೂಡಿರುವುದರಿಂದ ಇದು ಬಾಳಿಕೆ ಬರುವಂತಹದ್ದಾಗಿದೆ. ಸ್ಮಾರ್ಟ್ ಬಟ್ಟೆಯಿಂದ ಮಾಡಿದ ಬಟ್ಟೆಗಳನ್ನು ಎಂದಿನಂತೆ ತೊಳೆದು ಒಣಗಿಸಿ ಇಡಬಹುದು. ಸುಮಾರು 5 ತಿಂಗಳವರೆಗೆ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಈ ಬಟ್ಟೆಯಲ್ಲಿರುತ್ತದೆಯಂತೆ.
ಇದನ್ನೂ ಓದಿ: ವಿಂಡೋಸ್ 11ರಲ್ಲಿ ಗಮನಾರ್ಹ ಬದಲಾವಣೆ, ಅತಿ ವೇಗದ ಕೆಲಸ.. ಟೀಂ ಮೈಕ್ರೋಸಾಫ್ಟ್ ಬಣ್ಣನೆ