ಸ್ಯಾನ್ ಫ್ರಾನ್ಸಿಸ್ಕೋ : ಪ್ರತಿ ತಿಂಗಳಿಗೆ 12 ಅಥವಾ ಪ್ರತಿ ಮೂರು ದಿನಗಳಿಗೊಂದು ಉಪಗ್ರಹ ಉಡಾವಣೆ ಮಾಡುವ ಗುರಿಯನ್ನು ಹೊಂದಿರುವುದಾಗಿ ಎಲೋನ್ ಮಸ್ಕ್ ನೇತೃತ್ವದ ಏರೋಸ್ಪೇಸ್ ಕಂಪನಿ ಸ್ಪೇಸ್ ಎಕ್ಸ್ ಹೇಳಿದೆ. ಮುಂದಿನ ವರ್ಷ ಕಂಪನಿಯು ಒಟ್ಟಾರೆ 144 ಉಪಗ್ರಹಗಳನ್ನು ಉಡಾವಣೆ ಮಾಡುವ ಗುರಿಯನ್ನು ಹಾಕಿಕೊಂಡಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಆರ್ಸ್ ಟೆಕ್ನಿಕಾಗೆ ತಿಳಿಸಿದ್ದಾರೆ.
ಉಪಗ್ರಹ ಆಧರಿತ ಸೆಲ್ ಫೋನ್ ಸೇವೆಯನ್ನು ಬೆಂಬಲಿಸುವ ಸಲುವಾಗಿ ಸಾಧ್ಯವಾದಷ್ಟೂ ಹೆಚ್ಚಿನ ಸಂಖ್ಯೆಯ ಸ್ಟಾರ್ಲಿಂಕ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಸ್ಪೇಸ್ ಎಕ್ಸ್ ಪ್ರಯತ್ನಿಸುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಸ್ಟಾರ್ಲಿಂಕ್ ಉಪಗ್ರಹಗಳ ಮೂಲಕ ಕೇವಲ ಎಸ್ಎಂಎಸ್ ಕಳುಹಿಸಬಹುದಾದ ಮೊಬೈಲ್ ಸಂಪರ್ಕ ಆರಂಭಿಸುವ ಯೋಜನೆಯಿದೆ. 2025 ರ ವೇಳೆಗೆ ಇದು ಧ್ವನಿ ಹಾಗೂ ಡೇಟಾಗಳನ್ನು ಕೂಡ ಬೆಂಬಲಿಸುವ ಪೂರ್ಣ ಮಟ್ಟದ ಮೊಬೈಲ್ ಸಂಪರ್ಕ ವ್ಯವಸ್ಥೆಯಾಗಲಿದೆ.
"20 ಲಕ್ಷ ಗ್ರಾಹಕರನ್ನು ಹೊಂದಿರುವ ನಾವು ನಮ್ಮ ಕಾರ್ಯಾಚರಣೆಗಳನ್ನು ವಿಸ್ತರಿಸಬೇಕಿದೆ. ಸ್ಟಾರ್ಲಿಂಕ್ ಉಪಗ್ರಹದ ಮೂಲಕ ನೇರವಾಗಿ ಮೊಬೈಲ್ ಸಂಪರ್ಕ ವ್ಯವಸ್ಥೆಯನ್ನು ಆರಂಭಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ವರ್ಷ 144 ಸ್ಟಾರ್ಲಿಂಕ್ ಉಪಗ್ರಹಗಳನ್ನು ಇದಕ್ಕಾಗಿ ಉಡಾವಣೆ ಮಾಡಲಾಗುವುದು" ಎಂದು ಸ್ಪೇಸ್ಎಕ್ಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಕಳೆದ ವರ್ಷ 61 ಮತ್ತು ಹಿಂದಿನ 12 ತಿಂಗಳುಗಳಲ್ಲಿ ಮಂಗಳನ ಬಳಿಗೆ ಕಳುಹಿಸಲು ಯೋಜಿಸಲಾದ ಬಹುದೊಡ್ಡ ಸ್ಟಾರ್ಶಿಪ್ ರಾಕೆಟ್ ಒಂದರ ಪರೀಕ್ಷಾರ್ಥ ಹಾರಾಟ ಸೇರಿದಂತೆ 88 ರಾಕೆಟ್ಗಳನ್ನು ಸ್ಪೇಸ್ ಎಕ್ಸ್ ಹಾರಿಸಿದೆ.
ಫಾಲ್ಕನ್ 9 ಬೂಸ್ಟರ್ಗಳು ಮತ್ತು ಪೇಲೋಡ್ ಫೇರಿಂಗ್ಗಳನ್ನು ಮರುಪಡೆಯುವಲ್ಲಿ ಮತ್ತು ಅವನ್ನು ಮರುಬಳಕೆ ಮಾಡುವಲ್ಲಿನ ಯಶಸ್ಸು ಈ ಸಾಧನೆಯನ್ನು ಸಾಧ್ಯವಾಗಿಸುವ ಪ್ರಮುಖ ಅಂಶವಾಗಲಿದೆ. ಏತನ್ಮಧ್ಯೆ, ಸ್ಪೇಸ್ಎಕ್ಸ್ ಫಾಲ್ಕನ್ 9 ರಾಕೆಟ್ ಭಾನುವಾರ 23 ಸ್ಟಾರ್ಲಿಂಕ್ ಇಂಟರ್ನೆಟ್ ಉಪಗ್ರಹಗಳನ್ನು ಕಕ್ಷೆಗೆ ಉಡಾವಣೆ ಮಾಡಿದೆ. ಇದು 24 ಗಂಟೆಗಳಲ್ಲಿ ಕಂಪನಿಯ ಎರಡನೇ ಉಡಾವಣೆಯಾಗಿದೆ. ಉಡಾವಣೆಯ ಸುಮಾರು 65.5 ನಿಮಿಷಗಳ ನಂತರ ಫಾಲ್ಕನ್ 9 ರ ಮೇಲಿನ ಹಂತದಿಂದ 23 ಸ್ಟಾರ್ಲಿಂಕ್ ಉಪಗ್ರಹಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು Space ಡಾಟ್ com ವರದಿ ಮಾಡಿದೆ.
ಶನಿವಾರ ಕಂಪನಿಯು 21 ಸ್ಟಾರ್ಲಿಂಕ್ ಉಪಗ್ರಹಗಳನ್ನು ಉಡಾವಣೆ ಮಾಡಿದೆ. ಸ್ಟಾರ್ ಲಿಂಕ್ ಪ್ರಪಂಚದಾದ್ಯಂತದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಇಂಟರ್ನೆಟ್ ಸೇವೆಯನ್ನು ಒದಗಿಸುತ್ತದೆ. ಪ್ರಸ್ತುತ 4,900 ಸ್ಟಾರ್ಲಿಂಕ್ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಬೆಳೆಯುತ್ತಿರುವ ಭಾರತೀಯ ಇಂಟರ್ನೆಟ್ ಮಾರುಕಟ್ಟೆಯನ್ನು ಪ್ರವೇಶಿಸಲು ವಿವಿಧ ಮಾರ್ಗಗಳನ್ನು ಹುಡುಕುತ್ತಿರುವ ಮಸ್ಕ್ ನೇತೃತ್ವದ ಉಪಗ್ರಹ ಇಂಟರ್ನೆಟ್ ಕಂಪನಿ ಕಳೆದ ವರ್ಷ 1.4 ಬಿಲಿಯನ್ ಡಾಲರ್ ಆದಾಯ ಗಳಿಸಿದೆ.
ಇದನ್ನೂ ಓದಿ : ಒಂದೇ ಫೋನಿನಲ್ಲಿ 2 ವಾಟ್ಸ್ಆ್ಯಪ್ ಖಾತೆ ಲಾಗಿನ್: ಬಳಸುವುದು ಹೇಗೆ?