ನವದೆಹಲಿ: ಅಪರೂಪದ ವಿದ್ಯಮಾನವೊಂದರಲ್ಲಿ ಅಕ್ಟೋಬರ್ ತಿಂಗಳಲ್ಲಿ ಎರಡನೇ ಬಾರಿಗೆ ಗ್ರಹಣ ಗೋಚರಿಸಲಿದೆ. ಅಕ್ಟೋಬರ್ 29 ರಂದು ತನ್ನ ಎರಡನೇ ಗ್ರಹಣಕ್ಕೆ ತಿಂಗಳು ಸಾಕ್ಷಿಯಾಗಲಿದೆ. ಅಕ್ಟೋಬರ್ 14 ರಂದು ಸಂಭವಿಸಿದ ಸೂರ್ಯಗ್ರಹಣದ ಕೇವಲ 14 ದಿನಗಳ ನಂತರ 29ರಂದು ಭಾಗಶಃ ಚಂದ್ರ ಗ್ರಹಣ ಸಂಭವಿಸಲಿದೆ.
ಗ್ರಹಣದ ಸಮಯ: ವರ್ಷದ ಈ ಕೊನೆಯ ಗ್ರಹಣವಾಗಿರುವ ಈ ಚಂದ್ರಗ್ರಹಣವು ಭಾರತೀಯ ಸಮಯದ ಪ್ರಕಾರ ಅಕ್ಟೋಬರ್ 28 ರ ಶನಿವಾರ ರಾತ್ರಿ ಪ್ರಾರಂಭವಾಗಲಿದೆ. ಈ ಗ್ರಹಣದ ಒಟ್ಟು ಅವಧಿ 03 ಗಂಟೆ 07 ನಿಮಿಷಗಳು. ವಿಜ್ಞಾನ ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, ಭಾಗಶಃ ಚಂದ್ರ ಗ್ರಹಣವು 2023 ರ ಅಕ್ಟೋಬರ್ 28 - 29 ರಂದು ಸಂಭವಿಸಲಿದೆ (6-7 ಕಾರ್ತಿಕ, 1945 ಶಕ ಯುಗ). ಗ್ರಹಣ ಆರಂಭದ ಹಂತವು ಅಕ್ಟೋಬರ್ 29 ರಂದು ಭಾರತೀಯ ಕಾಲಮಾನ 01 ಗಂಟೆ 05 ನಿಮಿಷಕ್ಕೆ ಪ್ರಾರಂಭವಾಗುತ್ತದೆ ಮತ್ತು ಭಾರತೀಯ ಕಾಲಮಾನ 02 ಗಂಟೆ 24 ನಿಮಿಷಕ್ಕೆ ಕೊನೆಗೊಳ್ಳುತ್ತದೆ.
ಭಾಗಶಃ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸಲಿದೆಯೇ?: ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ, ಏಷ್ಯಾ, ಯುರೋಪ್, ಆಫ್ರಿಕಾ, ಪೂರ್ವ ದಕ್ಷಿಣ ಅಮೆರಿಕ, ಈಶಾನ್ಯ ಉತ್ತರ ಅಮೆರಿಕ, ಅಟ್ಲಾಂಟಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಗ್ರಹಣ ಗೋಚರಿಸಲಿದೆ ಎಂದು ಪಿಐಬಿ ಪ್ರಕಟಣೆ ತಿಳಿಸಿದೆ. ಭಾಗಶಃ ಚಂದ್ರಗ್ರಹಣವು ಮಧ್ಯರಾತ್ರಿಯ ಸುಮಾರಿಗೆ ಭಾರತದ ಎಲ್ಲ ಸ್ಥಳಗಳಿಂದ ಗೋಚರಿಸುತ್ತದೆ.
ನೋಡುವುದು ಹೇಗೆ?: ವಿಜ್ಞಾನಿಗಳ ಪ್ರಕಾರ, ಭಾಗಶಃ ಚಂದ್ರ ಗ್ರಹಣ ವೀಕ್ಷಿಸಲು ಗ್ರಹಣ ಕನ್ನಡಕಗಳಂತಹ ಅತ್ಯಾಧುನಿಕ ಉಪಕರಣಗಳನ್ನು ಹೊಂದುವ ಅಗತ್ಯವಿಲ್ಲ ಮತ್ತು ಇದನ್ನು ಬರಿಗಣ್ಣಿನಿಂದ ವೀಕ್ಷಿಸಬಹುದು. ನೀವು ಸರಿಯಾದ ಸಮಯಕ್ಕೆ ಆಕಾಶ ವೀಕ್ಷಣೆ ಮಾಡಿದರೆ ಸಾಕು, ಗ್ರಹಣವನ್ನು ಕಣ್ತುಂಬಿಕೊಳ್ಳಬಹುದು.
ಲೈವ್ ಸ್ಟ್ರೀಮಿಂಗ್: ಗ್ರಹಣ ಗೋಚರಿಸದ ಸ್ಥಳದಲ್ಲಿ ಇರುವವರು ಯುಟ್ಯೂಬ್ ಲೈವ್ ಸ್ಟ್ರೀಮಿಂಗ್ ಮೂಲಕ ಗ್ರಹಣ ವೀಕ್ಷಿಸಬಹುದು. Time and Date YouTube ಹೆಸರಿನ ಯುಟ್ಯೂಬ್ ಚಾನೆಲ್ನಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ನೋಡಬಹುದು.
ಭಾರತದಲ್ಲಿ ಮತ್ತೆ ಚಂದ್ರಗ್ರಹಣ ಕಾಣಿಸುವುದು ಯಾವಾಗ?: ಪಿಐಬಿ ಹೇಳಿಕೆಯ ಪ್ರಕಾರ, ಮುಂದಿನ ಚಂದ್ರ ಗ್ರಹಣವು ಸಂಪೂರ್ಣ ಚಂದ್ರ ಗ್ರಹಣವಾಗಿದ್ದು, ಇದು 2025 ರ ಸೆಪ್ಟೆಂಬರ್ 7 ರಂದು ಭಾರತದಲ್ಲಿ ಗೋಚರವಾಗಲಿದೆ. ಇಡೀ ಚಂದ್ರನು ಭೂಮಿಯ ನೆರಳಿನಲ್ಲಿ ಬಂದಾಗ ಸಂಪೂರ್ಣ ಚಂದ್ರ ಗ್ರಹಣ ಸಂಭವಿಸುತ್ತದೆ. ಭಾರತದಲ್ಲಿ 2022 ರ ನವೆಂಬರ್ 8 ರಂದು ಕೊನೆಯ ಬಾರಿಗೆ ಪೂರ್ಣ ಚಂದ್ರ ಗ್ರಹಣ ಸಂಭವಿಸಿತ್ತು.
ಇದನ್ನೂ ಓದಿ : ವಿಂಡೋಸ್ ಫೋನ್ ನಿಲ್ಲಿಸಿದ್ದು ತಪ್ಪು ನಿರ್ಧಾರವಾಗಿತ್ತು; ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಲ್ಲಾ