ನವದೆಹಲಿ: ಎಲೋನ್ ಮಸ್ಕ್ ಒಡೆತನದ ಎಕ್ಸ್ ಆ್ಯಪ್ ಬಳಕೆದಾರರು ಹೆಚ್ಚುತ್ತಿರುವ ಮಧ್ಯೆ ಮೆಟಾ ಒಡೆತನದ ಥ್ರೆಡ್ಸ್ ಆ್ಯಪ್ ಸಕ್ರಿಯ ಬಳಕೆದಾರರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಮತ್ತು ಎಲೋನ್ ಮಸ್ಕ್ ಮಧ್ಯದ ಕೇಜ್ ಫೈಟ್ ಡ್ರಾಮಾದ ನಡುವೆ ಇನ್ಸ್ಟಾಗ್ರಾಮ್ ಥ್ರೆಡ್ಸ್ ಅಪ್ಲಿಕೇಶನ್ ಆಂಡ್ರಾಯ್ಡ್ನಲ್ಲಿ ಶೇಕಡಾ 79 ರಷ್ಟು ದೈನಂದಿನ ಸಕ್ರಿಯ ಬಳಕೆದಾರರನ್ನು ಕಳೆದುಕೊಂಡಿದೆ ಎಂದು ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.
ತಂತ್ರಜ್ಞಾನ ವಿಶ್ಲೇಷಣಾ ಸಂಸ್ಥೆ ಸಿಮಿಲರ್ವೆಬ್ ಅಂದಾಜಿನ ಪ್ರಕಾರ, ಥ್ರೆಡ್ಸ್ ಆಂಡ್ರಾಯ್ಡ್ ಅಪ್ಲಿಕೇಶನ್ ಜುಲೈ 7 ರಲ್ಲಿದ್ದಂತೆ ವಿಶ್ವಾದ್ಯಂತ 49.3 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿತ್ತು. ಆದರೆ, ಆಗಸ್ಟ್ 7 ರಂದು ದೈನಂದಿನ ಸಕ್ರಿಯ ಬಳಕೆದಾರರ ಸಂಖ್ಯೆ 10.3 ಮಿಲಿಯನ್ಗೆ ಇಳಿದಿದೆ.
ಥ್ರೆಡ್ಸ್ ಅಪ್ಲಿಕೇಶನ್ ಆರಂಭವಾದ ಹೊಸತರಲ್ಲಿ ವಿಶ್ವಾದ್ಯಂತ ಪ್ರತಿಯೊಬ್ಬ ಬಳಕೆದಾರ ಸರಾಸರಿಯಾಗಿ 14 ನಿಮಿಷ ಆ್ಯಪ್ ಬಳಕೆಗಾಗಿ ವ್ಯಯಿಸುತ್ತಿದ್ದ. ಅದರಲ್ಲೂ ಈ ಸಮಯಾವಧಿ ಅಮೆರಿಕದಲ್ಲಿ ಸಾಕಷ್ಟು ಹೆಚ್ಚಾಗಿತ್ತು. ಜುಲೈ 7ರ ಹೊತ್ತಿಗೆ ಅಮೆರಿಕದಲ್ಲಿ ಪ್ರತಿಯೊಬ್ಬ ಥ್ರೆಡ್ಸ್ ಬಳಕೆದಾರ ಸರಾಸರಿ 21 ನಿಮಿಷಗಳಷ್ಟು ಸಮಯವನ್ನು ಆ್ಯಪ್ ನೋಡುವುದರಲ್ಲಿ ಕಳೆಯುತ್ತಿದ್ದ. ಆದರೆ, ಆಗಸ್ಟ್ 7ರ ವೇಳೆಗೆ ಜಾಗತಿಕವಾಗಿ ಇದು ಕೇವಲ 3 ನಿಮಿಷಕ್ಕೆ ಇಳಿದಿದೆ.
ಹೋಲಿಕೆ ಮಾಡಿ ನೋಡುವುದಾದರೆ ಎಕ್ಸ್ (ಹಿಂದೆ ಟ್ವಿಟರ್) ಆಂಡ್ರಾಯ್ಡ್ನಲ್ಲಿಯೇ 100 ದಶಲಕ್ಷಕ್ಕೂ ಹೆಚ್ಚು ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ ಮತ್ತು ಇವರು ನಿರಂತರವಾಗಿ ದಿನಕ್ಕೆ ಸುಮಾರು 25 ನಿಮಿಷಗಳನ್ನು ಆ್ಯಪ್ನಲ್ಲಿ ಕಳೆಯುತ್ತಾರೆ ಎಂದು ಡೇಟಾ ತೋರಿಸಿದೆ. ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಈಗಿನ ಎಕ್ಸ್ ಅಪ್ಲಿಕೇಶನ್ಗೆ ಮೆಟಾದ ಥ್ರೆಡ್ಸ್ ಪೈಪೋಟಿ ನೀಡಲಿದೆ ಎನ್ನಲಾಗಿತ್ತು. ಆದರೆ, ಥ್ರೆಡ್ಸ್ ಬಂದಷ್ಟೇ ವೇಗವಾಗಿ ಹೊರ ಹೋಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.
ಹೊಸ ಟೆಕ್ಸ್ಟ್ ಆಧಾರಿತ ಸೋಷಿಯಲ್ ಮೀಡಿಯಾ ಆ್ಯಪ್ ಥ್ರೆಡ್ಸ್ ಜುಲೈನಲ್ಲಿ ಲಾಂಚ್ ಆದಾಗ ದೊಡ್ಡ ಪ್ರಮಾಣದ ಬೆಂಬಲ ಪಡೆದುಕೊಂಡಿತ್ತು. ಆದರೆ, ಥ್ರೆಡ್ಸ್ನ ಸಕ್ರಿಯ ಬಳಕೆದಾರರಲ್ಲಿನ ಉತ್ಸಾಹ ಹೆಚ್ಚು ಕಾಲ ಉಳಿಯಲಿಲ್ಲ. ಹೊಸ ಬಳಕೆದಾರರು ಅಪ್ಲಿಕೇಶನ್ ಅನ್ನು ಪರಿಶೀಲಿಸುವಾಗ ಮತ್ತು ಅದರಲ್ಲಿ ಇನ್ನೂ ಯಾರಿದ್ದಾರೆ ಎಂಬುದನ್ನು ನೋಡುವಲ್ಲಿ ನಿರತರಾಗಿದ್ದಾಗ ಮೊದಲ ಎರಡು ದಿನಗಳಲ್ಲಿ ಅಪ್ಲಿಕೇಶನ್ನ ಸಕ್ರಿಯ ಬಳಕೆದಾರರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಅದು ವೇಗವಾಗಿ ಮಸುಕಾಯಿತು ಎಂದು ಸಿಮಿಲರ್ ವೆಬ್ ಹೇಳಿದೆ.
ಎಕ್ಸ್ (ಟ್ವಿಟರ್) ಬಳಕೆದಾರರನ್ನು ತನ್ನತ್ತ ಬರುವಂತೆ ಮಾಡುವ ವಿಶಿಷ್ಟ ಕಂಟೆಂಟ್ ಯಾವುದೂ ಸದ್ಯ ಥ್ರೆಡ್ಸ್ನಲ್ಲಿ ಇಲ್ಲ. ಇದು ಇವಾಗ ಎಕ್ಸ್ ಮಾಲೀಕ ಎಲೋನ್ ಮಸ್ಕ್ ಅವರನ್ನು ಟೀಕಿಸುವ ಪೋಸ್ಟ್ಗಳನ್ನು ಹಾಕುವ ಮತ್ತು ಕಾಮೆಂಟ್ ಮಾಡುವ ಮಧ್ಯಮವಾಗಿ ಉಳಿದುಕೊಂಡಿದೆ. ಎಕ್ಸ್ಗೆ ಪರ್ಯಾಯವಾಗಲು ಥ್ರೆಡ್ಸ್ ಈಗಲೂ ಉತ್ತಮ ಅವಕಾಶ ಹೊಂದಿದೆ. ಆದರೆ, ಅದು ಬಳಕೆದಾರರಿಗೆ ಉಪಯುಕ್ತವಾಗುವ ಇನ್ನೂ ಬಹಳಷ್ಟು ವೈಶಿಷ್ಟ್ಯಗಳನ್ನು ಪರಿಚಯಿಸಬೇಕಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ : Luna-25: 47 ವರ್ಷದ ಬಳಿಕ ಚಂದ್ರನಲ್ಲಿಗೆ ಹಾರಿದ ರಷ್ಯಾ ನೌಕೆ; ಚಂದ್ರಯಾನ-3 ಜೊತೆಗೇ ಇಳಿಯಬಹುದು ಲ್ಯಾಂಡರ್!