ನವದೆಹಲಿ: ಸ್ಟಾರ್ಲಿಂಕ್ ಇಂಟರ್ನೆಟ್ ಸೇವೆಯನ್ನು ಭಾರತದಲ್ಲಿ ನಿರ್ವಹಿಸಲು ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲೋನ್ ಮಸ್ಕ್ ಅವರೊಂದಿಗೆ ತಾನು ಯಾವುದೇ ಮಾತುಕತೆ ನಡೆಸುತ್ತಿಲ್ಲ ಎಂದು ವೊಡಾಫೋನ್ ಐಡಿಯಾ ಸ್ಪಷ್ಟಪಡಿಸಿದೆ. ಷೇರು ವಿನಿಮಯ ನಿಯಂತ್ರಕ ಸಂಸ್ಥೆಗೆ ಈ ಬಗ್ಗೆ ಮಾಹಿತಿ ನೀಡಿರುವ ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ, "ಕಂಪನಿಯು ಸ್ಟಾರ್ಲಿಂಕ್ನೊಂದಿಗೆ ಅಂತಹ ಯಾವುದೇ ಚರ್ಚೆ ನಡೆಸುತ್ತಿಲ್ಲ" ಎಂದು ಫೈಲಿಂಗ್ನಲ್ಲಿ ತಿಳಿಸಿದೆ.
ಈ ಸ್ಪಷ್ಟೀಕರಣದ ನಂತರ ವೊಡಾಫೋನ್ ಐಡಿಯಾ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ (ಬಿಎಸ್ಇ) ನಲ್ಲಿ ಶೇಕಡಾ 4 ಕ್ಕಿಂತ ಹೆಚ್ಚು ಕುಸಿದು 16.20 ರೂ.ಗೆ ತಲುಪಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ವೊಡಾಫೋನ್ ಐಡಿಯಾವನ್ನು ವೆರಿಝೋನ್, ಅಮೆಜಾನ್ ಅಥವಾ ಸ್ಟಾರ್ಲಿಂಕ್ ಸ್ವಾಧೀನಪಡಿಸಿಕೊಳ್ಳಬಹುದು ಎಂಬ ವರದಿಗಳು ಕೇಳಿ ಬಂದಿದ್ದವು. ಇದನ್ನು ಆಗ ಕಂಪನಿ ನಿರಾಕರಿಸಿತ್ತು.
ದೂರಸಂಪರ್ಕ ಮಸೂದೆ 2023 ಅನ್ನು ಲೋಕಸಭೆಯಲ್ಲಿ ಅಂಗೀಕರಿಸಿದ ನಂತರ ರಾಜ್ಯಸಭೆ ಕಳೆದ ತಿಂಗಳು ಧ್ವನಿ ಮತದ ಮೂಲಕ ಅಂಗೀಕರಿಸಿದೆ. ಹೊಸ ಮಸೂದೆಯು ಹರಾಜಿನಲ್ಲಿ ಭಾಗವಹಿಸುವ ಅಗತ್ಯವಿಲ್ಲದೆ ಉಪಗ್ರಹ ಆಧಾರಿತ ಸೇವೆಗಳಿಗೆ ಸ್ಪೆಕ್ಟ್ರಮ್ ಹಂಚಿಕೆಗೆ ಅನುಮತಿಸುತ್ತದೆ. ಇದು ಒನ್ವೆಬ್, ಎಲೋನ್ ಮಸ್ಕ್ ಅವರ ಸ್ಟಾರ್ಲಿಂಕ್ ಮತ್ತು ಅಮೆಜಾನ್ನ ಕುಯಿಪರ್ನಂಥ ಕಂಪನಿಗಳಿಗೆ ಅನುಕೂಲಕರವಾಗಿದೆ. ಈ ಹಿಂದೆ ಹಲವಾರು ವಿಫಲ ಪ್ರಯತ್ನಗಳ ನಂತರ, ಸ್ಟಾರ್ಲಿಂಕ್ ಮತ್ತೊಮ್ಮೆ ಈ ವರ್ಷ ಭಾರತದಲ್ಲಿ ತನ್ನ ಉಪಗ್ರಹ ಆಧರಿತ ಬ್ರಾಡ್ಬ್ಯಾಂಡ್ ಸೇವೆಗಳನ್ನು ಪ್ರಾರಂಭಿಸಲು ಉತ್ಸುಕವಾಗಿದೆ.
ಏತನ್ಮಧ್ಯೆ, ವೊಡಾಫೋನ್ ಐಡಿಯಾ 5 ಜಿ ನೆಟ್ವರ್ಕ್ ವಿಸ್ತರಿಸಲು ಮತ್ತು ಭಾರತದಲ್ಲಿ 4 ಜಿ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಲು ಗಮನಾರ್ಹ ಹೂಡಿಕೆ ಮಾಡಲು ಸಜ್ಜಾಗಿದೆ. ವೊಡಾಫೋನ್ ಐಡಿಯಾ ತಂಡವು ಕಳೆದ ವರ್ಷ 5 ಜಿಗಾಗಿ ಕೋರ್ ನೆಟ್ವರ್ಕ್ ಸಿದ್ಧಪಡಿಸಲು ಶ್ರದ್ಧೆಯಿಂದ ಕೆಲಸ ಮಾಡಿದೆ.
ಸ್ಟಾರ್ಲಿಂಕ್ ಎಂಬುದು ಉಪಗ್ರಹ ನಕ್ಷತ್ರಪುಂಜ ವ್ಯವಸ್ಥೆಯಾಗಿದ್ದು, ಇದು ಜಾಗತಿಕ ಇಂಟರ್ನೆಟ್ ವ್ಯಾಪ್ತಿಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಇಂಟರ್ನೆಟ್ ಸಂಪರ್ಕ ನೀಡಲಾಗದ ಗ್ರಾಮೀಣ ಮತ್ತು ಭೌಗೋಳಿಕವಾಗಿ ದುರ್ಗಮ ಪ್ರದೇಶಗಳಿಗೆ ಈ ವ್ಯವಸ್ಥೆಯು ಸೂಕ್ತವಾಗಿದೆ. ಸ್ಟಾರ್ಲಿಂಕ್ ದಶಕಗಳಿಂದ ಅಸ್ತಿತ್ವದಲ್ಲಿರುವ ಉಪಗ್ರಹ ಇಂಟರ್ನೆಟ್ ಸೇವಾ ತಂತ್ರಜ್ಞಾನವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಇಂಟರ್ನೆಟ್ ಡೇಟಾ ರವಾನಿಸಲು ಫೈಬರ್ ಆಪ್ಟಿಕ್ಸ್ ನಂತಹ ಕೇಬಲ್ ತಂತ್ರಜ್ಞಾನವನ್ನು ಬಳಸುವ ಬದಲು, ಉಪಗ್ರಹ ವ್ಯವಸ್ಥೆಯು ಬಾಹ್ಯಾಕಾಶದ ನಿರ್ವಾತದ ಮೂಲಕ ರೇಡಿಯೋ ಸಂಕೇತಗಳನ್ನು ರವಾನಿಸುತ್ತದೆ.
ಇದನ್ನೂ ಓದಿ : ವಾಟ್ಸ್ಆ್ಯಪ್ ಉಚಿತ ಬ್ಯಾಕಪ್ ಶೀಘ್ರ ಅಂತ್ಯ; ಜಿಮೇಲ್ ಸ್ಟೊರೇಜ್ ಆಕ್ರಮಿಸಲಿವೆ ಚಾಟ್ಗಳು