ನವದೆಹಲಿ : ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಶೋಧಕರು ಕೊರೊನಾ ವೈರಸ್ ಪರೀಕ್ಷಾ ವಿಧಾನದ ಪೋರ್ಟಬಲ್ ಕ್ಷಿಪ್ರ ರೋಗನಿರ್ಣಯ ಸಾಧನ ಪರಿಚಯಿಸಿದ್ದಾರೆ.
400 ರೂ. ಅಂದಾಜು ವೆಚ್ಚದಲ್ಲಿ 60 ನಿಮಿಷಗಳಲ್ಲಿ ಕೋವಿಡ್-19 ಸೋಂಕು ಪತ್ತೆ ಹಚ್ಚುವಂತಹ ಪೋರ್ಟಬಲ್ ಡಯಾಗ್ನೋಸ್ಟಿಕ್ ಸಾಧನವನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ ಖರಗ್‌ಪುರ್ ತಿಳಿಸಿದೆ.
ಸಂಶೋಧಕರು ತಯಾರಿಸಿದ ಅತ್ಯಾಧುನಿಕ ಕಿಟ್, ಕೊರೊನಾ ವೈರಸ್ ಸೋಂಕನ್ನು ಕ್ಷಿಪ್ರ ಪತ್ತೆಹಚ್ಚಲು ನೆರವಾಗಲಿದೆ. ಈ ಸಾಧನದ ವೆಚ್ಚ ಕೂಡ ಕಡಿಮೆ ಆಗಿದ್ದು, ದೇಶಾದ್ಯಂತ ಅನೇಕ ಜನರು ಭರಿಸಬಹುದಾಗಿದೆ.
ಐಐಟಿ ಖರಗ್‌ಪುರ್ ಪ್ರಕಾರ, ಪರೀಕ್ಷೆಯ ವೆಚ್ಚ 400 ರೂ.ಗೆ ನಿಗದಿಪಡಿಸಲಾಗಿದೆ. ವಿಶೇಷ ಪ್ರಯೋಗಾಲಯ ಸಾಧನಗಳಿಗೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಪರೀಕ್ಷೆ ನಡೆಸಬಹುದು ಎಂದು ಹೇಳಿದೆ.
ಒಂದು ಪೋರ್ಟಬಲ್ ಯೂನಿಟ್‌ನ ಬಹು ಸಂಖ್ಯೆಯ ಪರೀಕ್ಷೆಗಳಿಗೆ ಬಳಸಿಕೊಳ್ಳಬಹುದು. ನಿಖರ ಪರೀಕ್ಷಾ ಫಲಿತಾಂಶ ನೀಡುತ್ತದೆ. ಇದರ ನಿಖರತೆ ಮತ್ತು ಸೂಕ್ಷ್ಮತೆಯು ವೈದ್ಯಕೀಯ ಪ್ರಮಾಣಿತ ಆರ್‌ಟಿಪಿಸಿಆರ್ ಪರೀಕ್ಷೆಗಳಿಗೆ ಸಮ ಎಂದು ಸಂಶೋಧಕರು ಹೇಳಿದ್ದಾರೆ.
ವಿಶೇಷ ಪ್ರಯೋಗಾಲಯ ಉಪಕರಣಗಳಿಗೆ ಪರ್ಯಾಯವಾಗಿ ಅಲ್ಟ್ರಾ-ಲೋ-ಕಾಸ್ಟ್ ಪೋರ್ಟಬಲ್ನಲ್ಲಿ ಲಾಲಾರಸ ಆಧಾರಿತ ಪರೀಕ್ಷೆ ನಡೆಸಬಹುದು ಎಂದು ಐಐಟಿ ಖರಗ್‌ಪುರ್ ಹೇಳಿದೆ.
ಸಿಂಥೆಟಿಕ್ ವೈರಲ್ ಆರ್‌ಎನ್‌ಎ ಬಳಸಿ ಆರ್ಟಿ-ಪಿಸಿಆರ್ (ರಿವರ್ಸ್ ಟ್ರಾನ್ಸ್ಕ್ರಿಪ್ಷನ್ ಪಾಲಿಮರೇಸ್ ಚೈನ್ ರಿಯಾಕ್ಷನ್) ಯಂತ್ರದಿಂದ ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ ಸ್ಥಾಪಿತ ಪ್ರಯೋಗಾಲಯ ನಿಯಂತ್ರಣಗಳನ್ನು ಅನುಸರಿಸಿ ಹೊಸ ತಂತ್ರಜ್ಞಾನದಡಿ ಫಲಿತಾಂಶಗಳನ್ನು ಕಟ್ಟುನಿಟ್ಟಾಗಿ ಮೌಲ್ಯೀಕರಿಸಲಾಗಿದೆ ಎಂದು ಐಐಟಿ ಖರಗ್‌ಪುರ ತಿಳಿಸಿದೆ.
ಸಂಶೋಧಕರು ಅಭಿವೃದ್ಧಿಪಡಿಸಿದ ಪೋರ್ಟಬಲ್ ಸಾಧನವನ್ನು ಕೋವಿಡ್ -19ರ ರೋಗನಿರ್ಣಯಕ್ಕೆ ಬಳಸಿಕೊಳ್ಳಲಾಗಿದೆ. ಸಾಮಾನ್ಯ ವಿಧಾನವನ್ನು ಅನುಸರಿಸುವ ಮೂಲಕ ಬೇರೆ ಯಾವುದೇ ರೀತಿಯ ಆರ್‌ಎನ್‌ಎ ವೈರಸ್ ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಐಐಟಿ ಖರಗ್‌ಪುರದ ಸ್ಕೂಲ್ ಆಫ್ ಬಯೋ ಸೈನ್ಸ್ ಸಹಾಯಕ ಪ್ರಾಧ್ಯಾಪಕ ಅರಿಂದಮ್ ಮೊಂಡಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.