ವಾಷಿಂಗ್ಟನ್ (ಅಮೆರಿಕ): ಕೆಂಪು ಗ್ರಹ ಮಂಗಳನ ಮೇಲೆ ಕಲ್ಲಿನ ಮಾದರಿಗಳನ್ನು ಸಂಗ್ರಹಿಸುವ ಮೊದಲ ಪ್ರಯತ್ನದಲ್ಲಿ ನಾಸಾದ ಮಾರ್ಸ್ ರೋವರ್ ವಿಫಲವಾಗಿದ್ದು, ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನಿರೀಕ್ಷೆಗಳಿಗೆ ಸ್ವಲ್ಪ ಮಟ್ಟದ ಹಿನ್ನೆಡೆಯಾಗಿದೆ.
ಯಾವುದೇ ಕಲ್ಲಿನ ಮಾದರಿಯನ್ನು ಸಂಗ್ರಹಿಸಲು ಪರ್ಸೆವರೆನ್ಸ್ ರೋವರ್ ವಿಫಲವಾಗಿದೆ ಎಂದು ನಾಸಾ ಸ್ಪಷ್ಟನೆ ನೀಡಿದೆ. ಕಲ್ಲಿನ ರಚನೆಗಳ ಮೂಲಕ ಮಂಗಳ ಗ್ರಹದಲ್ಲಿ ಇದ್ದಿರಬಹುದಾದ ಜೀವಿಗಳ ಕುರಿತು ಅಧ್ಯಯನ ನಡೆಸಲು ನಾಸಾ ಮುಂದಾಗಿತ್ತು.
ನಾಸಾದ ಸೈನ್ಸ್ ಮಿಷನ್ ನಿರ್ದೇಶನಾಲಯದ ಸಹಾಯಕ ಆಡಳಿತಾಧಿಕಾರ ಥಾಮಸ್ ಝುರ್ಬುಚೆನ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮಂಗಳ ಕುರಿತು ಅಧ್ಯಯನ ಮಾಡುತ್ತಿರುವ ನಮ್ಮದು ಉತ್ತಮ ತಂಡ ಎಂಬ ವಿಶ್ವಾಸವಿದೆ. ಭವಿಷ್ಯದ ಯಶಸ್ಸಿಗಾಗಿ ನಾವು ಸತತ ಪ್ರಯತ್ನ ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಗಳನ ಜೆಝೆರೋ ಕ್ರೇಟರ್ನಲ್ಲಿ ಸಂಶೋಧನೆಗಾಗಿ ಇಳಿದಿರುವ ರೋವರ್ ಸುಮಾರು ಅಲ್ಲಿನ ಮಾದರಿಗಳನ್ನು ಸಂಗ್ರಹ ಮಾಡುವ ಸುಮಾರು 43 ಟೈಟಾನಿಯಂ ಟ್ಯೂಬ್ಗಳನ್ನು ಹೊಂದಿದೆ.
ಈ ಟ್ಯೂಬ್ಗಳಲ್ಲಿ ಒಡೆದ ಕಲ್ಲಿನ ಚೂರು ಮತ್ತು ಧೂಳನ್ನು ಸಂಗ್ರಹ ಮಾಡಲಾಗುತ್ತದೆ. ಈ ಧೂಳನ್ನು ಸಂಶೋಧನೆಗೆ ಒಳಪಡಿಸಿ, ಅಲ್ಲಿ ಇದ್ದಿರಬಹುದಾದ ಜೀವಿಗಳು ಮತ್ತು ಅಳಿದ ಜೀವಿಗಳ ಬಗ್ಗೆ ಸಂಶೋಧನೆ ನಡೆಸಲಾಗುತ್ತದೆ.
ಕೆಲವು ದಿನಗಳ ಹಿಂದೆ ಮಂಗಳ ಗ್ರಹದಲ್ಲಿ ಕೆಲವು ಕುಳಿಗಳು ಪತ್ತೆಯಾಗಿದ್ದು, ಈ ಕುಳಿಗಳಿಗೆ ನೀರು ಪ್ರವೇಶಿಸಬಹುದಾದ ಕಾಲುವೆಗಳಂತಹ ಮಾದರಿಗಳು ಪತ್ತೆಯಾಗಿಲ್ಲ, ಅಂತರ್ಜಲ ಹೊಂದಿರುವ ಬಗ್ಗೆಯೂ ಪುರಾವೆಗಳಿಲ್ಲ ಎಂದು ನಾಸಾ ಮಾಹಿತಿ ನೀಡಿತ್ತು.
ಇದನ್ನೂ ಓದಿ: ಮೆದುಳಿನ ಅಸ್ವಸ್ಥತೆಗಳ ಅಧ್ಯಯನಕ್ಕೆ ಮಾನವ ಮಾದರಿ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನಿ