ವಾಷಿಂಗ್ಟನ್ : ಏರ್ ಟ್ಯಾಕ್ಸಿಗಳು ಸ್ವತಂತ್ರವಾಗಿ ಹಾರಾಡುವ ಸಾಮರ್ಥ್ಯವನ್ನು ನಾಸಾ ಯಶಸ್ವಿಯಾಗಿ ಪರೀಕ್ಷೆ ಮಾಡಿದೆ. ವರ್ಜೀನಿಯಾದ ನಾಸಾದ ಲ್ಯಾಂಗ್ಲೆ ಸಂಶೋಧನಾ ಕೇಂದ್ರದ ಸಂಶೋಧಕರು ಏರ್ ಟ್ಯಾಕ್ಸಿಗಳ ಸ್ವತಂತ್ರ ಹಾರಾಟ ಸಾಮರ್ಥ್ಯವನ್ನು ಪರೀಕ್ಷಿಸಲು ಅನೇಕ ಡ್ರೋನ್ಗಳನ್ನು ಯಶಸ್ವಿಯಾಗಿ ಹಾರಿಸಿದ್ದಾರೆ. ಪರೀಕ್ಷೆಯ ಸಮಯದಲ್ಲಿ ಡ್ರೋನ್ಗಳನ್ನು ಕಣ್ಣಿಗೆ ಕಾಣಿಸದಷ್ಟು ದೂರ ಹಾರಿಸಲಾಯಿತು.
ಟೇಕ್ ಆಫ್ ಸಮಯದಲ್ಲಿ, ಯೋಜಿತ ಮಾರ್ಗದಲ್ಲಿ ಮತ್ತು ಇಳಿಯುವಾಗ ಡ್ರೋನ್ಗಳು ಎಲ್ಲ ಅಡೆತಡೆಗಳನ್ನು ಸರಾಗವಾಗಿ ದಾಟಿ ಒಂದಕ್ಕೊಂದು ಡಿಕ್ಕಿಯಾಗದೇ ಯಶಸ್ವಿಯಾಗಿ ಹಾರಿದವು. ಯಾವುದೇ ಪೈಲಟ್ ನಿಯಂತ್ರಣವಿಲ್ಲದೇ ಇವು ಸ್ವತಂತ್ರವಾಗಿ ಹಾಗೂ ಸ್ವಯಂಚಾಲಿತವಾಗಿ ಈ ಹಾರಾಟ ನಡೆಸಿದವು. ಈ ಪರೀಕ್ಷೆಯು ಏರ್ ಟ್ಯಾಕ್ಸಿಗಳಿಗೆ ಸ್ವಯಂ-ಹಾರಾಟ ಸಾಮರ್ಥ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.
ದೊಡ್ಡ ಗಾತ್ರದ ಪ್ರಯಾಣಿಕರನ್ನು ಸಾಗಿಸಬಲ್ಲ ಏರ್ ಟ್ಯಾಕ್ಸಿಗಳನ್ನು ಸ್ವತಃ ಹಾರಾಟ ನಡೆಸುವ ತಂತ್ರಜ್ಞಾನದ ಸಾಮರ್ಥ್ಯವನ್ನು ಚಿಕ್ಕ ಹಾಗೂ ಕಡಿಮೆ ವೆಚ್ಚದ ಡ್ರೋನ್ಗಳನ್ನು ಬಳಸಿ ಪರೀಕ್ಷಿಸುವುದು ಸುಲಭವಾಗಿದೆ. ಆಕಾಶದಲ್ಲಿ ಅವು ಒಂದಕ್ಕೊಂದು ಡಿಕ್ಕಿ ಹೊಡೆಯದೇ ಹೇಗೆ ಸಾಗುತ್ತವೆ ಮತ್ತು ಇತರ ಅಡೆತಡೆಗಳನ್ನು ಹೇಗೆ ದಾಟುತ್ತವೆ ಎಂಬುದನ್ನು ಈ ಮೂಲಕ ಪರೀಕ್ಷೆ ಮಾಡಬಹುದು. ಈ ಸ್ಟ್ಯಾಂಡ್-ಇನ್ ವಿಮಾನಗಳು ಸ್ವಯಂ-ಹಾರುವ ಏರ್ ಟ್ಯಾಕ್ಸಿಗಳನ್ನು ಆಕಾಶಕ್ಕೆ ಹಾರಿಸುವ ಮೊದಲು ಇವುಗಳ ಸಾಮರ್ಥ್ಯ ಅರಿಯಲು ನಾಸಾಗೆ ಸಹಾಯ ಮಾಡುತ್ತದೆ. ಈ ಯೋಜನೆಯ ಸಮಯದಲ್ಲಿ ರಚಿಸಲಾದ ಹೊಸ ಸ್ವಯಂಚಾಲಿತ ಏರ್ ಟ್ಯಾಕ್ಸಿ ತಂತ್ರಜ್ಞಾನವನ್ನು ನಾಸಾ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಿದೆ.
ವಾಹನ ಅಥವಾ ವಾಯುಪ್ರದೇಶವನ್ನು ನೇರ ಮಾನವ ಮೇಲ್ವಿಚಾರಣೆ ಇಲ್ಲದೇ ದೃಶ್ಯ ರೇಖೆಯನ್ನು ಮೀರಿ ವಾಹನಗಳನ್ನು ಹಾರಿಸುವುದು ಯಾಂತ್ರೀಕೃತ ಮತ್ತು ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ವರ್ಷಗಳಿಂದಲೂ ನಡೆದ ಸಂಶೋಧನಾ ಫಲಗಳನ್ನು ಪ್ರದರ್ಶಿಸುತ್ತದೆ ಎಂದು ನಾಸಾ ಲ್ಯಾಂಗ್ಲೆಯ ಏರೋನಾಟಿಕ್ಸ್ ಸಿಸ್ಟಮ್ಸ್ ಎಂಜಿನಿಯರಿಂಗ್ ಶಾಖೆಯ ಮುಖ್ಯಸ್ಥ ಲೌ ಗ್ಲಾಬ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏರ್ ಟ್ಯಾಕ್ಸಿ ಎಂಬುದು ಅಕ್ಷರಶಃ ಹಾರುವ ಕಾರಿನಂತಿರುತ್ತದೆ. ಇದೊಂದು ಸಣ್ಣ ವಾಣಿಜ್ಯ ವಿಮಾನ ಅಥವಾ ಹೆಲಿಕಾಪ್ಟರ್ ರೀತಿಯದ್ದಾಗಿರಬಹುದು. ಇಕ್ಕಟ್ಟಾದ ರಸ್ತೆಗಳನ್ನು ಹೊಂದಿರುವ ನಗರ ಕೇಂದ್ರಗಳಲ್ಲಿ ಪ್ರಯಾಣಕ್ಕೆ ಪರ್ಯಾಯವಾಗಿ ಇದನ್ನು ಪರಿಗಣಿಸಲಾಗಿದೆ ಮತ್ತು ಇದನ್ನು ಅರ್ಬನ್ ಏರ್ ಮೊಬಿಲಿಟಿ (ಯುಎಎಂ) ವೆಹಿಕಲ್ ಎಂದೂ ಕರೆಯಲಾಗುತ್ತದೆ.
ಇದನ್ನೂ ಓದಿ : ಸಾಮಾಜಿಕ ಮಾಧ್ಯಮ ತ್ಯಜಿಸಲಿದ್ದಾರೆ ಶೇ 50ಕ್ಕೂ ಹೆಚ್ಚು ಜನ; ಅಧ್ಯಯನ ವರದಿ