ಬೋಸ್ಟನ್( ಅಮೆರಿಕ): ಅದು 1969 ರ ಸಮಯ ಅಮೆರಿಕದ ನಾಸಾ ಮಹತ್ವದ ಹಾಗೂ ಆಗಿನ ಕಾಲಕ್ಕೆ ಕ್ರಾಂತಿಕಾರಕ ಸಾಹಸ ಮಾಡಿತ್ತು. ಅಪೊಲೊ 11 ಮಿಷನ್ ಚಂದ್ರನ ಅಂಗಳಕ್ಕೆ ತೆರಳಿ ನೀಲ್ ಆರ್ಮ್ಸ್ಟ್ರಾಂಗ್ ಚಂದಪ್ಪನ ನೆಲ ಸ್ಪರ್ಶೀಸಿದ್ದರು. ಆಗ ಚಂದ್ರನ ಅಂಗಳದಿಂದ ಅಲ್ಲಿನ ಧೂಳನ್ನು ಸಂಗ್ರಹಿಸಿಕೊಂಡು ಬರಲಾಗಿತ್ತು.
ಆ ಧೂಳಿನ ಮಾರಾಟವನ್ನು ನಿಲ್ಲಿಸಲು ಬಾಹ್ಯಾಕಾಶ ಸಂಸ್ಥೆ ನಾಸಾ ಬೋಸ್ಟನ್ ಮೂಲದ RR ಹರಾಜಯ ಸಂಸ್ಥೆಯನ್ನು ಕೇಳಿಕೊಂಡಿದೆ. ಇನ್ನೂ ವಿಶೇಷ ಎಂದರೆ ಚಂದ್ರನ ಬಂಡೆಯು ಯಾವುದೇ ರೀತಿಯ ರೋಗಕಾರಕವನ್ನು ಹೊಂದಿದೆಯೇ ಇಲ್ಲವೇ ಎಂಬುದನ್ನು ಅಲ್ಲಿಂದ ತಂದ ಧೂಳಿನೊಂದಿಗೆ ಜಿರಳೆಗಳನ್ನ ಬಿಟ್ಟು ಪ್ರಯೋಗ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಾಸಾ ಈ ಬಗ್ಗೆ ಮತ್ತೆ ಅಧ್ಯಯನ ನಡೆಸುವ ಉದ್ದೇಶದಿಂದ ಈ ಧೂಳನ್ನು ಹರಾಜು ಹಾಕದಂತೆ ಹಾಗೂ ಈಗಾಗಲೇ ಹರಾಜಾಗಿರುವ ಅದನ್ನು ತನಗೆ ಮರಳಿಸುವಂತೆ ಆರ್ ಆರ್ ಸಂಸ್ಥೆಯನ್ನು ಕೇಳಿಕೊಂಡಿದೆ.
ಹರಾಜುದಾರರಿಗೆ ನಾಸಾ ಬರೆದ ಪತ್ರದಲ್ಲೇನಿದೆ?: ಸುಮಾರು 40 ಮಿಲಿಗ್ರಾಂ ಚಂದ್ರನ ಧೂಳು ಮತ್ತು ಮೂರು ಜಿರಳೆಗಳ ಮೃತದೇಹಗಳನ್ನು ಹೊಂದಿರುವ ಸೀಸೆ ಸೇರಿದಂತೆ ಪ್ರಯೋಗದ ವಸ್ತುವನ್ನು ಹರಾಜಿಗೆ ಇಡಲಾಗಿದೆ. ಇದು ಸುಮಾರು ಕನಿಷ್ಠ ಎಂದರೂ 400,000 ಡಾಲರ್ಗೆ ಕ್ಕೆ ಮಾರಾಟವಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ನಾಸಾ ಆರ್‌ಆರ್ ಸಂಸ್ಥೆಗೆ ಪತ್ರ ಬರೆದಿದ್ದು, ಇದನ್ನು ಹರಾಜು ಹಾಕಬೇಡಿ ಎಂದು ಪತ್ರ ಬರೆದು ಮನವಿ ಮಾಡಿದೆ.
ಎಲ್ಲ ಅಪೊಲೊ ಮಾದರಿಗಳು NASAಗೆ ಸೇರಿದ್ದಾಗಿವೆ. ಯಾವುದೇ ವ್ಯಕ್ತಿ, ವಿಶ್ವವಿದ್ಯಾನಿಲಯ ಅಥವಾ ಇತರ ಘಟಕಗಳಿಗೆ ವಿಶ್ಲೇಷಣೆ, ವಿನಾಶ ಅಥವಾ ಯಾವುದೇ ಉದ್ದೇಶಕ್ಕಾಗಿ ಅದರಲ್ಲೂ ವಿಶೇಷವಾಗಿ ಮಾರಾಟ ಅಥವಾ ವೈಯಕ್ತಿಕ ಪ್ರದರ್ಶನಕ್ಕಾಗಿ ಅವುಗಳನ್ನು ಇರಿಸಿಕೊಳ್ಳಲು ಅನುಮತಿ ನೀಡಲಾಗಿಲ್ಲ ಎಂದು ಆರ್ಆರ್ಗೆ ಜೂನ್ 15 ರಂದು ನಾಸಾ ಬರೆದ ಪತ್ರದಲ್ಲಿ ಹೇಳಲಾಗಿದೆ.
ತಕ್ಷಣ ಹರಾಜು ನಿಲ್ಲಿಸಿ: ಬಿಡ್ಡಿಂಗ್ ಪ್ರಕ್ರಿಯೆ ತಕ್ಷಣವೇ ನಿಲ್ಲಿಸುವಂತೆ ಆರ್‌ಆರ್ ಹರಾಜು ಸಂಸ್ಥೆಗೆ ಮನವಿ ಮಾಡಿರುವ ನಾಸಾ, ಅಪೊಲೊ 11 ಸಂಗ್ರಹಿಸಿರುವ ಚಂದ್ರನ ಮಣ್ಣು ಹಾಗೂ ಅದರ ಮೇಲೆ ನಡೆದಿರುವ ಪ್ರಯೋಗ(ಜಿರಳೆಗಳು, ಸ್ಲೈಡ್‌ಗಳು ಮತ್ತು ನಂತರದ ವಿನಾಶಕಾರಿ ಪರೀಕ್ಷೆಯ ಮಾದರಿ) ಹಾಗೂ ಪ್ರಯೋಗಕ್ಕೆ ಬಳಸಿರುವ ಯಾವುದೇ ವಸ್ತುಗಳ ಮಾರಾಟವನ್ನು ತಕ್ಷಣವೇ ತಡೆ ಹಿಡಿಯುವಂತೆ ನಾವು ವಿನಂತಿಸುತ್ತಿದ್ದೇವೆ ಎಂದು ನಾಸಾ ಪತ್ರದಲ್ಲಿ ತಿಳಿಸಿತ್ತು. ಇದಷ್ಟೇ ಅಲ್ಲ ಜೂನ್ 22 ರಂದು ಮತ್ತೊಂದು ಪತ್ರ ಬರೆದ NASA ವಕೀಲರು, RR ಹರಾಜನ್ನು ಫೆಡರಲ್ ಸರ್ಕಾರಕ್ಕೆ ಹಿಂದಿರುಗಿಸಲು ಮನವಿ ಮಾಡಿದ್ದರು.
ಏನಿದು ಪ್ರಯೋಗ: ಅಪೊಲೊ 11 ಮಿಷನ್ ಚಂದ್ರನ ಅಂಗಳದಿಂದ 47 ಪೌಂಡ್‌ಗಳಿಗಿಂತ ಹೆಚ್ಚು (21.3 ಕಿಲೋಗ್ರಾಂಗಳು) ಪ್ರಮಾಣದ ಕಲ್ಲು ಮತ್ತು ಮಣ್ಣನ್ನು ಭೂಮಿಗೆ ತೆಗೆದುಕೊಂಡು ಬಂದಿತ್ತು. ಅಲ್ಲಿಂದ ತಂದ ಕಲ್ಲು ಮತ್ತು ಮಣ್ಣಿನಲ್ಲಿ ಜೀವಿಗಳು ಇವೆಯಾ ಎಂಬುದನ್ನು ಪರೀಕ್ಷಿಸಲು ಹಾಗೂ ಆ ಮಣ್ಣಲ್ಲಿ ಜೀವಿಗಳು ಬದುಕುಳಿಯುತ್ತವಾ ಎಂಬುದನ್ನು ಕಂಡುಕೊಳ್ಳುವ ಉದ್ದೇಶದಿಂದ ಕೆಲವು ಕೀಟಗಳು, ಮೀನುಗಳು ಮತ್ತು ಇತರ ಸಣ್ಣ ಜೀವಿಗಳನ್ನು ಚಂದ್ರನಿಂದ ತಂದ ಮಣ್ಣಲ್ಲಿ ಬಿಡಲಾಗಿತ್ತು. ಚಂದ್ರನ ಕಲ್ಲು - ಮಣ್ಣು ಭೂಮಿಯ ಜೀವಿಗಳನ್ನು ಕೊಲ್ಲುತ್ತದಾ ಎಂಬ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿತ್ತು.
ಅಧ್ಯಯನದ ಹಿನ್ನೆಲೆ ಏನು?: ಅಷ್ಟೇ ಅಲ್ಲ ಚಂದ್ರನ ಧೂಳನ್ನು ಮೂರು ಜಿರಳೆಗಳಿಗೆ ತಿನ್ನಿಸಿ ಅವುಗಳನ್ನು ಅಮೆರಿದಕ ಮಿನ್ನೇಸೋಟ ವಿಶ್ವವಿದ್ಯಾಲಯಕ್ಕೆ ಅಧ್ಯಯನ ನಡೆಸಲು ತರಲಾಗಿತ್ತು. ಅಲ್ಲಿ ಆಗ ಕೀಟಶಾಸ್ತ್ರಜ್ಞರಾಗಿದ್ದ ಮರಿಯನ್ ಬ್ರೂಕ್ಸ್ ಅವುಗಳನ್ನು ಅಧ್ಯಯನಕ್ಕೊಳಪಡಿಸಿದ್ದರು.
ಆದರೆ ಜಿರಳೆಗಳ ಮೇಲೆ ನಡೆಸಿದ ಅಧ್ಯಯನದಿಂದ ಆ ಮಣ್ಣಲ್ಲಿ ಜೀವಿಗಳು ಬದುಕುತ್ತವೆ ಇಲ್ಲವೇ ಸಾಯುತ್ತವಾ ಎಂಬ ಬಗ್ಗೆ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಇನ್ನು ಈ ಬಗ್ಗೆ ಅಧ್ಯಯನ ನಡೆಸಿದ್ದ ಬ್ರೂಕ್ಸ್ 2007 ರಲ್ಲಿ ನಿಧನರಾಗಿದ್ದರು. ಅವರು ಈ ಮೊದಲು ಅಂದರೆ ಅಕ್ಟೋಬರ್ 1969 ರಲ್ಲಿ ತಮ್ಮ ಅಧ್ಯಯನದ ಕುರಿತು ಮಿನ್ನಿಯಾಪೋಲಿಸ್ ಟ್ರಿಬ್ಯೂನ್‌ಗೆ ಜೀವಿಗಳು ಚಂದ್ರನ ಮಣ್ಣಲ್ಲಿ ಬದುಕುತ್ತವಾ ಅಥವಾ ಸಾಯುತ್ತವಾ ಎಂಬ ಬಗ್ಗೆ ಏನನ್ನು ಕಂಡುಕೊಳ್ಳಲಾಗಿಲ್ಲ ಎಂದು ಹೇಳಿದ್ದರು.
ಚಂದ್ರನ ವಸ್ತುವು ವಿಷಕಾರಿಯಾಗಿದೆ ಅಥವಾ ಕೀಟಗಳ ಮೇಲೆ ಈ ಮಣ್ಣು ಯಾವುದೇ ಇತರ ದುಷ್ಪರಿಣಾಮಗಳನ್ನು ಉಂಟುಮಾಡಿದೆ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ಕಂಡುಕೊಳ್ಳಲಾಗಿಲ್ಲ ಎಂದು ಮಿನ್ನಿಯಾಪೋಲಿಸ್ ಟ್ರಿಬ್ಯೂನ್ ಹೇಳಿತ್ತು.
ಸಂಶೋಧನೆ ಬಳಿಕ ಪ್ರಯೋಗದ ಮಾದರಿ ನಾಸಾಗೆ ಹಿಂದಿರುಗಿಸಿರಲಿಲ್ಲ: ಇನ್ನು ಚಂದ್ರನ ಮೇಲಿನ ಧೂಳು ಮತ್ತು ಪ್ರಯೋಗಕ್ಕೆ ಬಳಸಿದ್ದ ಜಿರಳೆಗಳನ್ನು ನಾಸಾಗೆ ಬ್ರೂಕ್ಸ್ ಹಿಂತಿರುಗಿಸಿರಲಿಲ್ಲ. ಬದಲಿಗೆ ಅವರ ಮನೆಯಲ್ಲೇ ಈ ಪ್ರಯೋಗದ ಮಾದರಿಗಳನ್ನು ಇಟ್ಟುಕೊಂಡಿದ್ದರು. ಮತ್ತು ಅವರು 2007 ರಲ್ಲಿ ಇಹಲೋಕ ತ್ಯೆಜಿಸಿದ್ದರು ಕೂಡಾ. ಇನ್ನು ಈ ಮಾದರಿಗಳನ್ನು ಬ್ರೂಕ್ಸ್ ಅವರ ಮಗಳು 2010ರಲ್ಲಿ ಮಾರಾಟ ಮಾಡಿದ್ದರು. ಈಗ RR ಎಂಬ ಹರಾಜು ಸಂಸ್ಥೆ ಮರು ಮಾರಾಟಕ್ಕೆ ಸಿದ್ಧವಾಗಿದೆ.
ಹರಾಜಿಗೆ ತಡೆ: ಆದರೆ ಇದೀಗ ನಾಸಾ ಆರ್‌ಆರ್ ಹರಾಜು ಸಂಸ್ಥೆಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಈ ಮಾದರಿಗಳ ಹರಾಜಿಗೆ ತಡೆ ನೀಡಿದೆ. ಈ ಬಗ್ಗೆ ಮಾತನಾಡಿರುವ ಆರ್‌ಆರ್ ಸಂಸ್ಥೆಯ ವಕೀಲರು, ಹರಾಜಾಗುತ್ತಿರುವ ಯಾವುದನ್ನಾದರೂ ಮೂರನೇ ವ್ಯಕ್ತಿಗೆ ಹಕ್ಕು ಸಾಧಿಸುವುದು ಅಸಾಧ್ಯವಾದುದೇನಲ್ಲ ಎಂದಿದ್ದಾರೆ. ನಾಸಾ ಬಳಿ ಆರಂಭಿಕ ದಾಖಲೆಗಳು ಇವೆ. ಆದರೆ ಈ ವಸ್ತುಗಳು ಈಗಾಗಲೇ ಮಾರಾಟವಾಗಿರುವುದರಿಂದ ಈ ಬಗ್ಗೆ ನಾಸಾಗೆ ಏನೂ ತಿಳಿದಿಲ್ಲ.
ಆದರೂ ಈ ಮೊದಲು ಸಹ ನಾವು ನಾಸಾ ಜತೆ ಕೆಲಸ ಮಾಡಿದ್ದೇವೆ. ಅಮೆರಿಕ ಸರ್ಕಾರದೊಂದಿಗೆ ಮೊದಲಿನಿಂದಲೂ ಸಹಕಾರ ನೀಡಿದ್ದೇವೆ ಎಂದು ಆರ್‌ಆರ್ ವಕೀಲ ಝೈದ್ ಹೇಳಿದ್ದಾರೆ. ಆದರೆ ನಾವು ಕಾನೂನು ಪ್ರಕಾರವೇ ಈ ಹರಾಜಿನ ವಿಷಯವನ್ನು ನಿರ್ವಹಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆರ್‌ಆರ್ ಹರಾಜಿಗೆ ತಡೆ ನೀಡುತ್ತಿದ್ದೇವೆ. ಆದರೆ ಅಂತಿಮವಾಗಿ ಈ ಮಾದರಿಗಳನ್ನು ಮಾರಾಟ ಮಾಡುತ್ತಿರುವವರು ನಾಸಾದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಹಾಗೂ ಸಹಮತಕ್ಕೆ ಬರುವುದು ಅವರಿಗೆ ಬಿಟ್ಟಿದ್ದು ಎಂದು ಆರ್‌ಆರ್ ಹರಾಜು ಸಂಸ್ಥೆ ಸ್ಪಷ್ಟಪಡಿಸಿದೆ.
ಇದನ್ನು ಓದಿ:2031ರಲ್ಲಿ ಭೂಮಿಗೆ ಮಂಗಳನಲ್ಲಿನ ಮಾದರಿ: ಚೀನಾ ಮಹಾ ಯೋಜನೆ