ನವದೆಹಲಿ : ತಪ್ಪು ಮಾಹಿತಿ ಹರಡುವಿಕೆ, ದುಷ್ಟ ಬಳಕೆದಾರರ ಹೆಚ್ಚಳ ಮತ್ತು ಬಾಟ್ಗಳ ಹಸ್ತಕ್ಷೇಪಗಳನ್ನು ತಡೆಯಲಾಗದೆ 2025ರ ವೇಳೆಗೆ ಶೇ 50ಕ್ಕೂ ಹೆಚ್ಚು ಗ್ರಾಹಕರು ಸಾಮಾಜಿಕ ಮಾಧ್ಯಮಗಳಿಂದ ದೂರ ಹೋಗಲಿದ್ದಾರೆ ಅಥವಾ ಅವುಗಳ ಬಳಕೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದ್ದಾರೆ ಎಂದು ವರದಿ ಹೇಳಿದೆ. ಹಿಂದಿನ ವರ್ಷ ಅಥವಾ ಐದು ವರ್ಷಗಳ ಹಿಂದೆ ಹೋಲಿಸಿದರೆ ಸಾಮಾಜಿಕ ಮಾಧ್ಯಮದ ಪ್ರಸ್ತುತ ಸ್ಥಿತಿ ಹಾಳಾಗಿದೆ ಎಂದು ಶೇಕಡಾ 53 ರಷ್ಟು ಗ್ರಾಹಕರು ನಂಬಿದ್ದಾರೆ ಎಂದು ಗಾರ್ಟ್ನರ್ ಸಮೀಕ್ಷೆ ಕಂಡುಹಿಡಿದಿದೆ.
ಸಾಮಾಜಿಕ ಮಾಧ್ಯಮದಲ್ಲಿ ಜೆನ್ ಎಐ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದೆ ಮತ್ತು ಇದರಿಂದ ಸಾಮಾಜಿಕ ಮಾಧ್ಯಮಗಳು ಬಳಕೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಪ್ರತಿ 10 ರಲ್ಲಿ 7 ಬಳಕೆದಾರರ ಅಭಿಪ್ರಾಯವಾಗಿದೆ. "ಸಾಮಾಜಿಕ ಮಾಧ್ಯಮವು ಡಿಜಿಟಲ್ ಮಾರ್ಕೆಟಿಂಗ್ನ ಪ್ರಮುಖ ಮೂಲವಾಗಿದೆಯಾದರೂ ಗ್ರಾಹಕರು ಮಾತ್ರ ತಮ್ಮ ಸಾಮಾಜಿಕ ಮಾಧ್ಯಮದ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಗಾರ್ಟ್ನರ್ ಮಾರ್ಕೆಟಿಂಗ್ ವಿಭಾಗದ ಹಿರಿಯ ಪ್ರಧಾನ ಸಂಶೋಧಕ ಎಮಿಲಿ ವೈಸ್ ಹೇಳಿದರು.
"ಕಳೆದ ಕೆಲ ವರ್ಷಗಳ ಹಿಂದೆ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವೈಯಕ್ತಿಕ ಜೀವನದ ಮಾಹಿತಿಗಳನ್ನು ಹೆಚ್ಚಾಗಿ ಹಂಚಿಕೊಳ್ಳುತ್ತಿದ್ದರು. ಆದರೆ ಆ ಟ್ರೆಂಡ್ ಈಗ ಕಡಿಮೆಯಾಗುತ್ತಿದೆ. ಹೀಗಾಗಿ ಕಂಪನಿಗಳ ಮಾರ್ಕೆಟಿಂಗ್ ತಜ್ಞರು ತಮ್ಮ ಮಾರ್ಕೆಟಿಂಗ್ ತಂತ್ರಗಾರಿಕೆಯನ್ನು ಬದಲಾಯಿಸಿಕೊಳ್ಳುವ ಅಗತ್ಯ ಉಂಟಾಗಿದೆ” ಎಂದು ಎಮಿಲಿ ವೈಸ್ ತಿಳಿಸಿದರು.
ಎಐನ ಸಾಮರ್ಥ್ಯಗಳ ಬಗ್ಗೆ ಅಪನಂಬಿಕೆ ಮತ್ತು ವಿಶ್ವಾಸದ ಕೊರತೆಯ ಕಾರಣದಿಂದ ಹಲವಾರು ಗ್ರಾಹಕರು ಎಐ-ಮುಕ್ತ ಸಾಮಾಜಿಕ ಮಾಧ್ಯಮಗಳು ಮತ್ತು ಸಂಪರ್ಕ ವ್ಯವಸ್ಥೆಗಳನ್ನು ಹುಡುಕಲಾರಂಭಿಸಿದ್ದಾರೆ. "ಕೆಲ ಬ್ರಾಂಡ್ಗಳು ತಮ್ಮ ಮಾಧ್ಯಮಗಳಲ್ಲಿ ಎಐ ತಂತ್ರಜ್ಞಾನದ ಹಸ್ತಕ್ಷೇಪವನ್ನು ಕಡಿಮೆಗೊಳಿಸಬಹುದು ಮತ್ತು ಅದರ ಬದಲಾಗಿ ವಾಸ್ತವಿಕ ಮಾನವರಿಂದ ಕೆಲಸ ಮಾಡಿಸಬಹುದು. ಎಐ-ಚಾಲಿತ ವ್ಯವಹಾರಗಳ ಗ್ರಹಿಕೆಗಳಿಂದ ತಮ್ಮ ಬ್ರಾಂಡ್ಗಳನ್ನು ದೂರವಿರಿಸಲು ಈ ಪರಿಕಲ್ಪನೆಯನ್ನು ಬಳಸಿಕೊಳ್ಳಲಾಗುವುದು" ಎಂದು ವೈಸ್ ವಿವರಿಸಿದರು.
2028 ರ ವೇಳೆಗೆ, ಗ್ರಾಹಕರು ಎಐ-ಚಾಲಿತ ಸರ್ಚ್ ಅನ್ನು ಅಳವಡಿಸಿಕೊಳ್ಳುವುದರಿಂದ ಬ್ರಾಂಡ್ಗಳ ನೇರ (ಆರ್ಗಾನಿಕ್) ಸರ್ಚ್ ಟ್ರಾಫಿಕ್ ಶೇಕಡಾ 50 ಅಥವಾ ಅದಕ್ಕಿಂತ ಹೆಚ್ಚು ಕಡಿಮೆಯಾಗುತ್ತದೆ. ಸರ್ಚ್ ಇಂಜಿನ್ಗಳಲ್ಲಿ ಜೆನ್ ಎಐನ ತ್ವರಿತ ಅಳವಡಿಕೆಯು ತಮ್ಮ ಬ್ರಾಂಡ್ಗಳ ಮಾರಾಟ ಹೆಚ್ಚಿಸಲು ಆರ್ಗಾನಿಕ್ ಸರ್ಚ್ ಬಳಸಿಕೊಳ್ಳುವ ಸಿಎಂಒಗಳ ಪ್ರಯತ್ನಗಳಿಗೆ ಗಮನಾರ್ಹವಾಗಿ ಅಡ್ಡಿಯಾಗಲಿದೆ.
ಇದನ್ನೂ ಓದಿ : ವಿಂಡೋಸ್ 10ಗೆ ಮೈಕ್ರೊಸಾಫ್ಟ್ ಸಪೋರ್ಟ್ ಅಂತ್ಯ: ನಿರುಪಯುಕ್ತವಾಗಲಿವೆ 240 ಮಿಲಿಯನ್ ಪಿಸಿಗಳು