ಸಿಡ್ನಿ(ಆಸ್ಟ್ರೇಲಿಯಾ): ದೇಶದಲ್ಲಿ 12 ಗಂಟೆಗಳ ಕಾಲ ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕ ಕಡಿತವಾಗಿದ್ದ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಆಸ್ಟ್ರೇಲಿಯಾ ಸರ್ಕಾರ ಗುರುವಾರ ಹೇಳಿದೆ. ಆಸ್ಟ್ರೇಲಿಯಾದ ಪ್ರಮುಖ ಟೆಲಿಕಾಂ ಕಂಪನಿ ಟೆಲ್ಕೊ ಆಪ್ಟಸ್ನ ಇಂಟರ್ನೆಟ್ ಮತ್ತು ಮೊಬೈಲ್ ಸೇವೆ 12 ಗಂಟೆಗಳ ಕಾಲ ಸ್ಥಗಿತಗೊಂಡಿದ್ದವು. ಇದರಿಂದ ದೇಶದ ಅರ್ಧದಷ್ಟು ಜನ ಪಾವತಿ, ಸಾರಿಗೆ ಮತ್ತು ಆಸ್ಪತ್ರೆಗಳು ಸೇರಿದಂತೆ ಪ್ರಮುಖ ಸೇವೆಗಳನ್ನು ಪಡೆಯಲು ಪರದಾಡುವಂತಾಗಿತ್ತು.
ಬುಧವಾರ ಟೆಲ್ಕೊ ಆಪ್ಟಸ್ನ ತಾಂತ್ರಿಕ ದೋಷದಿಂದ ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದವು. ಇದರಿಂದ ಆಸ್ಟ್ರೇಲಿಯಾದ ಸುಮಾರು 1 ಕೋಟಿ ಅಥವಾ ಜನಸಂಖ್ಯೆಯ ಶೇ 40ರಷ್ಟು ಜನ ಅಗತ್ಯ ಸೇವೆಗಳನ್ನು ಪಡೆಯಲು ಸಾಧ್ಯವಿಲ್ಲದೆ ಹತಾಶರಾದರು.
ಈ ರಹಸ್ಯ ತಾಂತ್ರಿಕ ದೋಷದಿಂದ ದೇಶದ ಬಹುತೇಕ ಎಲೆಕ್ಟ್ರಾನಿಕ್ ಪಾವತಿ ವ್ಯವಸ್ಥೆಗಳು ಸ್ಥಗಿತಗೊಂಡಿದ್ದವು. ಆಂಬ್ಯುಲೆನ್ಸ್ಗಳು ಮತ್ತು ಪೊಲೀಸರು ಬಳಸುವ ಫೋನ್ ಲೈನ್ಗಳು ಕೂಡ ಕೆಲಸ ಮಾಡಲಿಲ್ಲ. ಅಲ್ಲದೆ ಕೆಲ ಸಮಯದವರೆಗೆ ದೇಶದ ಅತಿದೊಡ್ಡ ನಗರವಾದ ಮೆಲ್ಬೋರ್ನ್ನಲ್ಲಿ ರೈಲುಗಳು ಕೂಡ ಓಡಲಿಲ್ಲ.
ಟೆಲಿಕಾಂ ಸಂಪರ್ಕ ಕಡಿತ ಕಳವಳಕಾರಿ ಘಟನೆಯಾಗಿದ್ದು ಇದರ ಬಗ್ಗೆ ಫೆಡರಲ್ ಸರ್ಕಾರ ತನಿಖೆ ನಡೆಸಲಿದೆ ಎಂದು ಸಂವಹನ ಸಚಿವ ಮಿಚೆಲ್ ರೋಲ್ಯಾಂಡ್ ಹೇಳಿದ್ದಾರೆ. "ಒಂದು ದಿನದಲ್ಲಿ ಆಪ್ಟಸ್ ಟೆಲಿಕಾಂ ಸೇವೆಗಳನ್ನು ಪುನಃಸ್ಥಾಪಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ನಿನ್ನೆಯ ಘಟನೆಯಿಂದ ಕಲಿಯಬೇಕಾದ ಪಾಠಗಳನ್ನು ಗುರುತಿಸುವ ಪ್ರಕ್ರಿಯೆ ನಡೆಸುವುದು ಸರ್ಕಾರದ ಉದ್ದೇಶವಾಗಿದೆ" ಎಂದು ರೋಲ್ಯಾಂಡ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಆಸ್ಟ್ರೇಲಿಯಾದ ಗ್ರಾಹಕರು ಮತ್ತು ವ್ಯವಹಾರಗಳಿಗೆ ನೆಟ್ವರ್ಕ್ ಸಂಪರ್ಕ ತೀರಾ ಅಗತ್ಯವಾಗಿದೆ ಮತ್ತು ಈ ಸ್ಥಗಿತದ ಪರಿಣಾಮಗಳು ವಿಶೇಷವಾಗಿ ಕಳವಳಕಾರಿಯಾಗಿವೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಂಗಾಪುರ್ ಟೆಲಿಕಮ್ಯುನಿಕೇಷನ್ಸ್ ಒಡೆತನದ ಆಪ್ಟಸ್ ಆಸ್ಟ್ರೇಲಿಯಾದ ಎರಡನೇ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿದೆ. ದೇಶ ಕಂಡ ಅತಿದೊಡ್ಡ ಟೆಲಿಕಾಂ ಸೇವೆಗಳ ಸ್ಥಗಿತದ ಘಟನೆಗೆ ಕಾರಣವೇನೆಂಬುದನ್ನು ಆಪ್ಟಸ್ ಈವರೆಗೂ ತಿಳಿಸಿಲ್ಲ. ಆದರೆ ಇದಕ್ಕೆ ಹ್ಯಾಕಿಂಗ್ ಕಾರಣ ಎಂಬ ವಾದಗಳನ್ನು ಅದು ತಳ್ಳಿಹಾಕಿದೆ. ನೆಟ್ವರ್ಕ್ ಸ್ಥಗಿತದಿಂದ ನಷ್ಟ ಅನುಭವಿಸಿದ ಉದ್ಯಮಗಳು ಆಪ್ಟಸ್ ತಮಗಾದ ನಷ್ಟ ಭರಿಸುವಂತೆ ಆಗ್ರಹಿಸಿವೆ. ಸರ್ಕಾರ ನಡೆಸುತ್ತಿರುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಆಪ್ಟಸ್ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: 28 ಲಕ್ಷ ಚಂದಾದಾರರನ್ನು ಕಳೆದುಕೊಂಡ Disney+ Hotstar