ಬೆಂಗಳೂರು: ತಮ್ಮ ಖಾತೆಗಳನ್ನು ನಿಯಮಿತವಾಗಿ ಬಳಸದ ಜಿಮೇಲ್ ಬಳಕೆದಾರರ ಖಾತೆಗಳು ಮುಂಬರುವ ತಿಂಗಳಲ್ಲಿ ಡಿಲೀಟ್ ಆಗುವ ಸಾಧ್ಯತೆಗಳಿವೆ. ಕನಿಷ್ಠ ಎರಡು ವರ್ಷಗಳಿಂದ ನಿಷ್ಕ್ರಿಯವಾಗಿರುವ ಜಿಮೇಲ್ ಖಾತೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಡಿಸೆಂಬರ್ 2023ರಲ್ಲಿ ಗೂಗಲ್ ಪ್ರಕಟಿಸಿತ್ತು. ಅದರ ಭಾಗವಾಗಿ ಮುಂದಿನ ಕೆಲ ತಿಂಗಳುಗಳಲ್ಲಿ ಲಕ್ಷಾಂತರ ಜಿಮೇಲ್ ಖಾತೆಗಳು ನಿಷ್ಕ್ರಿಯವಾಗಲಿವೆ.
ಮೇ ತಿಂಗಳಲ್ಲಿ ಬ್ಲಾಗ್ ಪೋಸ್ಟ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದ ಗೂಗಲ್ ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷ ರುತ್ ಕ್ರಿಚೆಲಿ, ಜಿಮೇಲ್ ಖಾತೆಗಳ ಮೇಲಿನ ಅಪಾಯ ಕಡಿಮೆ ಮಾಡಲು ಕಂಪನಿ ಯತ್ನಿಸುತ್ತಿದೆ ಎಂದು ಹೇಳಿದ್ದರು. ನಮ್ಮ ಯಾವುದೇ ಉತ್ಪನ್ನಗಳಾದ್ಯಂತ 2 ವರ್ಷಗಳಿಂದ ನಿಷ್ಕ್ರಿಯವಾಗಿರುವ ಜಿಮೇಲ್ ಖಾತೆಗಳನ್ನು ರದ್ದುಗೊಳಿಸುವ ಹಾಗೆ ನಮ್ಮ ನೀತಿಯನ್ನು ನಾವು ಬದಲಾಯಿಸುತ್ತಿದ್ದೇವೆ. ಈ ಡಿಸೆಂಬರ್ನಲ್ಲಿ ಇದ್ದಂತೆ ಯಾವುದೇ ಜಿಮೇಲ್ ಖಾತೆಯನ್ನು 2 ವರ್ಷಗಳಿಂದ ಬಳಸದೇ ಇದ್ದಲ್ಲಿ ಅಥವಾ ಸೈನ್ ಇನ್ ಮಾಡದಿದ್ದರೆ ಗೂಗಲ್ ವರ್ಕ್ಸ್ಪೇಸ್ (ಜಿಮೇಲ್, ಡಾಕ್ಸ್, ಡ್ರೈವ್, ಮೀಟ್, ಕ್ಯಾಲೆಂಡರ್) ಮತ್ತು ಗೂಗಲ್ ಫೋಟೋಗಳೊಳಗಿನ ಕಂಟೆಂಟ್ ಸೇರಿದಂತೆ ಜಿಮೇಲ್ ಖಾತೆ ಮತ್ತು ಅದರ ಕಂಟೆಂಟ್ಗಳನ್ನು ನಾವು ಅಳಿಸಬಹುದು ಎಂದು ಅವರು ತಿಳಿಸಿದ್ದಾರೆ.
ಮರೆತುಹೋದ ಅಥವಾ ಬಳಕೆಯಲ್ಲಿಲ್ಲದ ಖಾತೆಗಳು ಸಾಮಾನ್ಯವಾಗಿ ಹಳೆಯ ಅಥವಾ ಮರುಬಳಕೆಯ ಪಾಸ್ವರ್ಡ್ಗಳನ್ನು ಅವಲಂಬಿಸಿರುತ್ತವೆ. ಇಂಥ ಪಾಸ್ವರ್ಡ್ಗಳು ಕೆಲವೊಮ್ಮೆ ಬೇರೆಯವರಿಗೆ ಗೊತ್ತಾಗಿರಬಹುದು. ಅವುಗಳಿಗೆ ಟು ಸ್ಟೆಪ್ ವೆರಿಫಿಕೇಶನ್ ಕೂಡ ಇರುವುದಿಲ್ಲ ಮತ್ತು ಬಳಕೆದಾರರು ಅವುಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಕಷ್ಟಕರ ಎಂದು ಪೋಸ್ಟ್ನಲ್ಲಿ ತಿಳಿಸಲಾಗಿದೆ.
ಯಾವೆಲ್ಲ ಜಿಮೇಲ್ ಖಾತೆಗಳು ಡಿಲೀಟ್ ಆಗಬಹುದು?: ಹಿಂದಿನ ಎರಡು ವರ್ಷಗಳಲ್ಲಿ ತಮ್ಮ ಜಿಮೇಲ್ ಖಾತೆಯನ್ನು ಒಮ್ಮೆಯೂ ಬಳಸದ ವೈಯಕ್ತಿಕ ಗೂಗಲ್ ಖಾತೆಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಶಾಲೆಗಳು ಅಥವಾ ವ್ಯವಹಾರಗಳಂತಹ ಸಂಸ್ಥೆಗಳ ಖಾತೆಗಳ ಮೇಲೆ ಪರಿಣಾಮ ಬೀರುವುದಿಲ್ಲ.
ನಿಮ್ಮ ಖಾತೆಯನ್ನು ಸಕ್ರಿಯವಾಗಿಡುವುದು ಹೇಗೆ?: ಗೂಗಲ್ ಬ್ಲಾಗ್ ಪೋಸ್ಟ್ ಪ್ರಕಾರ, ಗೂಗಲ್ ಖಾತೆಯನ್ನು ಸಕ್ರಿಯವಾಗಿಡಲು ಸರಳ ಮಾರ್ಗವೆಂದರೆ ಕನಿಷ್ಠ ಎರಡು ವರ್ಷಗಳಿಗೊಮ್ಮೆ ಸೈನ್ ಇನ್ ಮಾಡಬೇಕು. ನೀವು ಇತ್ತೀಚೆಗೆ ನಿಮ್ಮ ಗೂಗಲ್ ಖಾತೆ ಅಥವಾ ನಮ್ಮ ಯಾವುದೇ ಸೇವೆಗಳಿಗೆ ಸೈನ್ ಇನ್ ಮಾಡಿದ್ದರೆ, ನಿಮ್ಮ ಖಾತೆಯನ್ನು ಸಕ್ರಿಯವೆಂದು ಪರಿಗಣಿಸಲಾಗುತ್ತದೆ ಮತ್ತು ಅದನ್ನು ಡಿಲೀಟ್ ಮಾಡಲಾಗುವುದಿಲ್ಲ. ಈ ಮುಂದೆ ತೋರಿಸಲಾದ ಯಾವುದೇ ಚಟುವಟಿಕೆಯನ್ನು ಖಾತೆಯ ಸಕ್ರಿಯತೆಗೆ ಪರಿಗಣಿಸಲಾಗುವುದು:
- ಇಮೇಲ್ ಓದುವುದು ಅಥವಾ ಕಳುಹಿಸುವುದು
- ಗೂಗಲ್ ಡ್ರೈವ್ ಬಳಸುವುದು
- ಯೂಟ್ಯೂಬ್ ವಿಡಿಯೋ ನೋಡುವುದು
- ಗೂಗಲ್ ಪ್ಲೇ ಸ್ಟೋರ್ನಲ್ಲಿ ಅಪ್ಲಿಕೇಶನ್ ಡೌನ್ ಲೋಡ್ ಮಾಡುವುದು
- ಗೂಗಲ್ ಸರ್ಚ್ಗೆ ಖಾತೆ ಬಳಸುವುದು
- ಥರ್ಡ್ ಪಾರ್ಟಿ ಅಪ್ಲಿಕೇಶನ್ ಅಥವಾ ಸೇವೆಗೆ ಸೈನ್ ಇನ್ ಮಾಡಲು ಗೂಗಲ್ ಸೈನ್-ಇನ್ ಬಳಸುವುದು
ಇದನ್ನೂ ಓದಿ : 12 ಗಂಟೆಗಳ ಕಾಲ ಮೊಬೈಲ್-ಇಂಟರ್ನೆಟ್ ಸ್ಥಗಿತ; ಇಡೀ ದೇಶದಲ್ಲಿ ಜನಜೀವನ ಅಸ್ತವ್ಯಸ್ತ!