ನವದೆಹಲಿ : ಮೈಕ್ರೊಸಾಫ್ಟ್ ಟ್ರಾನ್ಸಲೇಟರ್ನಲ್ಲಿ ಶ್ರೀಲಂಕಾದ ಅಧಿಕೃತ ಭಾಷೆಯಾದ ಸಿಂಹಳ, ಕೊಂಕಣಿ, ಮೈಥಿಲಿ ಮತ್ತು ಸಿಂಧಿ ಈ ನಾಲ್ಕು ಹೊಸ ಭಾರತೀಯ ಭಾಷೆಗಳನ್ನು ಸೇರ್ಪಡೆ ಮಾಡಿರುವುದಾಗಿ ಮೈಕ್ರೊಸಾಫ್ಟ್ ಇಂಡಿಯಾ ಗುರುವಾರ ಪ್ರಕಟಿಸಿದೆ. ಸದ್ಯ ಮೈಕ್ರೊಸಾಫ್ಟ್ ಟ್ರಾನ್ಸಲೇಟರ್ ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕೊಂಕಣಿ, ಮೈಥಿಲಿ, ಮಲಯಾಳಂ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಹೀಗೆ 16 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ.
ನಾವು ಮೈಥಿಲಿ, ಕೊಂಕಣಿ, ಸಿಂಧಿ ಮತ್ತು ಸಿಂಹಳ ಭಾಷೆಗಳನ್ನು ಸೇರ್ಪಡೆ ಮಾಡುವ ಮೂಲಕ ನಮ್ಮ ಭಾಷಾ ಸಾಮರ್ಥ್ಯಗಳನ್ನು ವಿಸ್ತರಿಸುತ್ತಿದ್ದೇವೆ. ಭಾರತದ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಅತ್ಯಾಧುನಿಕ AI ನೊಂದಿಗೆ ನಾವು ಭಾರತದ ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯತೆ ಆಚರಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದು ಮೈಕ್ರೋಸಾಫ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಳಕೆದಾರರು ತಮ್ಮ ಅಪ್ಲಿಕೇಶನ್‌ಗಳು, ವೆಬ್‌ಸೈಟ್‌ಗಳು, ವರ್ಕ್‌ಫ್ಲೋಗಳು ಮತ್ತು ಪರಿಕರಗಳಿಗಾಗಿ 125 ಕ್ಕೂ ಹೆಚ್ಚು ಭಾಷೆಗಳಲ್ಲಿ ಬೆಂಬಲಿತವಾಗಿರುವ ಕೊಂಕಣಿ, ಮೈಥಿಲಿ, ಸಿಂಧಿ ಮತ್ತು ಸಿಂಹಳ ಪಠ್ಯವನ್ನು Azure Cognitive Services Translator ಮೂಲಕ ಅನುವಾದಿಸಬಹುದು ಎಂದು ಕಂಪನಿ ಹೇಳಿದೆ. ಭಾರತದಲ್ಲಿ ಎರಡು ದಶಲಕ್ಷಕ್ಕೂ ಹೆಚ್ಚು ಜನರು ಕೊಂಕಣಿ ಮಾತನಾಡುತ್ತಾರೆ. ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಈ ಭಾಷಿಕರು ಹೆಚ್ಚಾಗಿದ್ದಾರೆ. ಅಲ್ಲದೇ ಕೇರಳ ಮತ್ತು ಗುಜರಾತ್‌ನಂಥ ಭಾರತದ ಇತರ ಭಾಗಗಳಲ್ಲಿ ಸಹ ಈ ಭಾಷೆಯನ್ನು ಮಾತನಾಡುತ್ತಾರೆ.
ಮೈಥಿಲಿಯನ್ನು ಭಾರತ ಮತ್ತು ನೇಪಾಳದಲ್ಲಿ 75 ಮಿಲಿಯನ್ ಜನರು ಮಾತನಾಡುತ್ತಾರೆ. ಇದು ಬಿಹಾರದಲ್ಲಿ ಹೆಚ್ಚು ಮಾತನಾಡುವ ಎರಡನೇ ಭಾಷೆಯಾಗಿದೆ ಮತ್ತು ನೆರೆಯ ರಾಜ್ಯಗಳಾದ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಮಾತನಾಡುತ್ತಾರೆ ಎಂದು ಕಂಪನಿ ಹೇಳಿದೆ. ಸಿಂಧಿಯು ಭಾರತದಲ್ಲಿ ಮತ್ತು ಹಲವಾರು ಇತರ ಉಪಖಂಡದ ದೇಶಗಳಲ್ಲಿ 20 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮಾತನಾಡುತ್ತಾರೆ. ಸಿಂಹಳವನ್ನು ಶ್ರೀಲಂಕಾ, ಮಲೇಷ್ಯಾ ಮತ್ತು ಸಿಂಗಾಪುರ್ಗಳಲ್ಲಿ 16 ಮಿಲಿಯನ್‌ಗಿಂತಲೂ ಹೆಚ್ಚು ಜನರು ಮಾತನಾಡುತ್ತಾರೆ. ಮೈಕ್ರೊಸಾಫ್ಟ್ ಟ್ರಾನ್ಸಲೇಟರ್ ಅನ್ನು Windows, iOS, Android ಮತ್ತು ವೆಬ್‌ನಾದ್ಯಂತ ಬಳಸಬಹುದು.
ಮೈಕ್ರೋಸಾಫ್ಟ್ ಟ್ರಾನ್ಸಲೇಟರ್ ಇದು ಮೈಕ್ರೋಸಾಫ್ಟ್ ಕಾರ್ಪೊರೇಷನ್ ಅಭಿವೃದ್ಧಿಪಡಿಸಿದ ಬಹುಭಾಷಾ ಮಶೀನ್ ಟ್ರಾನ್ಸಲೇಟರ್ ಸೇವೆಯಾಗಿದೆ. ಇದು ಮೈಕ್ರೋಸಾಫ್ಟ್ ಕಾಗ್ನಿಟಿವ್ ಸೇವೆಗಳ ಒಂದು ಭಾಗವಾಗಿದೆ ಮತ್ತು ಅದರ ವಿವಿಧ ಉತ್ಪನ್ನಗಳಾದ್ಯಂತ ಸಂಯೋಜಿಸಲ್ಪಟ್ಟಿದೆ. ವ್ಯವಹಾರಗಳಿಗೆ ಕ್ಲೌಡ್ ಸೇವೆಗಳ ಮೂಲಕ ಪಠ್ಯ ಮತ್ತು ಭಾಷಣ ಅನುವಾದ ನೀಡುತ್ತದೆ ಮತ್ತು ಪ್ರಸ್ತುತ 87 ಭಾಷೆಗಳು ಮತ್ತು 12 ಭಾಷಣ ಅನುವಾದ ವ್ಯವಸ್ಥೆಗಳ ಅನುವಾದವನ್ನು ಬೆಂಬಲಿಸುತ್ತದೆ. ಪಠ್ಯ ಮತ್ತು ಭಾಷಣವನ್ನು ಭಾಷಾಂತರಿಸಲು, ಸಂಭಾಷಣೆಗಳನ್ನು ಅನುವಾದಿಸಲು ಮತ್ತು ಆಫ್‌ಲೈನ್‌ನಲ್ಲಿ ಬಳಸಲು AI ಚಾಲಿತ ಭಾಷಾ ಸಾಫ್ಟವೇರ್ಗಳನ್ನು ಡೌನ್‌ಲೋಡ್ ಮಾಡಲು ಮೈಕ್ರೊಸಾಫ್ಟ್ ಟ್ರಾನ್ಸಲೇಟರ್ ನಿಮಗೆ ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ : ವಿಂಡೋಸ್ 11 ಬಳಕೆದಾರರಿಗೆ IOS ಫೋನ್ ಲಿಂಕ್ ವೈಶಿಷ್ಟ್ಯ ಲಭ್ಯ: ಮೈಕ್ರೊಸಾಫ್ಟ್ ಹೊಸ ಅಪ್ಡೇಟ್